2ಬಿ ಮೀಸಲಾತಿ ರದ್ದು | ಸಂವಿಧಾನ ತಜ್ಞರೊಂದಿಗೆ ಚರ್ಚಿಸಿ ಕಾನೂನು ಹೋರಾಟ: ಮುಸ್ಲಿಮ್ ಮುಖಂಡರು

Update: 2023-03-25 15:48 GMT

ಬೆಂಗಳೂರು, ಮಾ.25: ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ರಾಜ್ಯ ಸರಕಾರದ ಸಂವಿಧಾನ ವಿರೋಧಿ ನಿರ್ಣಯವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸುವುದಾಗಿ ಮುಸ್ಲಿಮ್ ಮುಖಂಡರು ಪ್ರಕಟಿಸಿದ್ದಾರೆ. 

ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಮುಸ್ಲಿಮ್ ಯೂನಿಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ಚಿಂತಕ ಬಿ.ಎಂ.ಹನೀಫ್, ಯೂನಿಟಿಯ ಜಬ್ಬಾರ್ ಬಾಗಲಕೋಟೆ, ನ್ಯಾಯವಾದಿ ಅನೀಸ್ ಪಾಷಾ, ಕಾಂಗ್ರೆಸ್ ನಾಯಕ ಜಿ.ಎ.ಬಾವಾ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ಚಿಂತಕರು ಪಾಲ್ಗೊಂಡು, ಮೀಸಲಾತಿ ರದ್ದು ವಿರೋಧಿಸಿ  ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ಕಿತ್ತು ಇನ್ನೊಂದು ಸಮುದಾಯಕ್ಕೆ ಹಂಚುವ ಮೂಲಕ ಸಮುದಾಯಗಳ ನಡುವೆ ದ್ವೇಷ ಬೀಜ ಬಿತ್ತಿ ಮತ ಗಳಿಸುವ ಹುನ್ನಾರ ಮಾಡಿದೆ. ಜಾತ್ಯತೀತ ನೆಲೆಗಟ್ಟಿನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ.

ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಖಂಡನೀಯ. ಎಲ್ಲ ಸಮುದಾಯದ ಹಿತ ಕಾಯುವ ಮುಖ್ಯಮಂತ್ರಿ ಎನ್ನುವ ಅಭಿಪ್ರಾಯಕ್ಕೆ ಬಸವರಾಜ ಬೊಮ್ಮಾಯಿ ತಿಲಾಂಜಲಿ ಇಟ್ಟಿದ್ದಾರೆ ಎಂದು ಸಭೆಯಲ್ಲಿ ಹಲವು ಮುಖಂಡರು ಬೇಸರ ವ್ಯಕ್ತಪಡಿಸಿದರು.

ಸಭೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿಂತಕ ಬಿ.ಎಂ‌.ಹನೀಫ್,  ರಾಜ್ಯದಲ್ಲಿ ನಾಗನಗೌಡ ಸಮಿತಿಯಿಂದ ಹಿಡಿದು ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದವರೆಗೆ ಕಳೆದ 60 ವರ್ಷಗಳಲ್ಲಿ ಬಂದಿರುವ ಎಲ್ಲ ಆಯೋಗಗಳೂ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ. ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದ ಅಧ್ಯಯನಪೂರ್ಣ ವರದಿಯ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದಲ್ಲಿ ಶೇಕಡಾ 4 ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಇದನ್ನು ಏಕಾಏಕಿ ರದ್ದು ಪಡಿಸಿರುವುದು ಸಂವಿಧಾನವಿರೋಧಿ ಕ್ರಮ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಅದು ಅಲ್ಲದೆ, ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಶಿಫಾರಸ್ಸಿನ ಅನ್ವಯ ಮುಸ್ಲಿಮ್ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಅವರನ್ನು ಮುಂದುವರಿದ ವರ್ಗ ಎಂದು ಪರಿಗಣಿಸಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಿ ಮೀಸಲಾತಿ ಕೊಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

ಜಯಪ್ರಾಶ್‌ ಹೆಗ್ಡೆ ಆಯೋಗವು ಈ ಕುರಿತು ಯಾವ ಸಮೀಕ್ಷೆಯನ್ನೂ ಮಾಡದೆ ಹೇಗೆ ನಿರ್ಧಾರ ಕೈಗೊಂಡಿದೆ? ಜಯಪ್ರಕಾಶ್‌ ಹೆಗ್ಡೆ ಆಯೋಗವು ರಹಸ್ಯ ಸಮೀಕ್ಷೆ ಏನಾದರೂ ಮಾಡಿದೆಯೆ? ಹಾಗಿದ್ದರೆ ಆ ವರದಿಯನ್ನು ಸರಕಾರ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಬೀದಿಗಿಳಿದು ಪ್ರತಿಭಟನೆ ಮಾಡುವ ಉದ್ದೇಶ ಹೊಂದಿಲ್ಲ.ಆದರೆ, ಮುಸ್ಲಿಮರ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ಸಮುದಾಯ ಯಾವುದೇ ಭಾವಾವೇಶಕ್ಕೆ ಒಳಗಾಗದೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಬೇಕು ಎಂದು ಹನೀಫ್ ನುಡಿದರು.

Similar News