ಯಡಿಯೂರಪ್ಪ ನಿವಾಸದ ಮೇಲಿನ ದಾಳಿ ಖಂಡನೀಯ: ರಣದೀಪ್ ಸಿಂಗ್ ಸುರ್ಜೆವಾಲಾ

Update: 2023-03-27 15:53 GMT

ಬೆಂಗಳೂರು, ಮಾ.27: ಯಡಿಯೂರಪ್ಪ ನಿವಾಸದ ಮೇಲೆ ದಾಳಿ ನಡೆದಿರುವುದು ಖಂಡನೀಯ. ಯಾರ ನಿವಾಸದ ಮೇಲೂ ದಾಳಿ ನಡೆಯಬಾರದು. ಬಿಜೆಪಿಯ ದ್ವೇಷ ಹಾಗೂ ವಿಭಜನೆಯ ರಾಜಕೀಯ ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳಲ್ಲಿ ಅಶಾಂತಿಗೆ ಕಾರಣವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.

ಸೋಮವಾರ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಮನೆ ಮುತ್ತಿಗೆ ಹಾಕುವ ಬದಲು ಯಡಿಯೂರಪ್ಪರ ಮನೆ ಮುತ್ತಿಗೆ ಹಾಕಲಾಗುತ್ತಿದೆ. ಅವರು ಯಾವುದೇ ಹುದ್ದೆಯಲ್ಲಿಲ್ಲ. ಬಿಜೆಪಿ ಪ್ರಚಾರ ಸಮಿತಿಯಲ್ಲೂ ಸ್ಥಾನ ಪಡೆದಿಲ್ಲ. ಬಿಜೆಪಿಯ ಬೇರೊಬ್ಬರು ಯಡಿಯೂರಪ್ಪರನ್ನು ಗುರಿಯಾಗಿಸಲು ಅವರ ಮನೆ ಮುತ್ತಿಗೆ ಹಾಕಲು ಕಳುಹಿಸುತ್ತಿದ್ದಾರೆ. ಇದು ಬಿಜೆಪಿಯ ಆಂತರಿಕ ಸಮಸ್ಯೆಯಾಗಿದ್ದು, ರಾಜಕೀಯ ಲಾಭಕ್ಕಾಗಿ ಈ ಸಂಘರ್ಷವನ್ನು ಹೊತ್ತಿಸಲಾಗುತ್ತಿದೆ. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು ಎಂದರು.

ಈ ಸರಕಾರ ಒಕ್ಕಲಿಗರು, ಲಿಂಗಾಯತರು, ಮುಸ್ಲಿಮ್ ಸಹಿತ ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಮಾಡುತ್ತಿದೆ. ಅವರು 90 ದಿನಗಳ ಅಂತರದಲ್ಲಿ 3 ಬಾರಿ ಮೀಸಲಾತಿ ವರ್ಗೀಕರಣ ಬದಲಿಸಿದ್ದಾರೆ. ಈ ಸರಕಾರ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸದೇ ಪೂರಕವಾದ ಅಂಕಿಅಂಶಗಳು ಇಲ್ಲದೆ, ಹಿಂ.ವರ್ಗಗಳ ಆಯೋಗದ ಅಂತಿಮ ವರದಿ ಪಡೆಯದೇ ಮೀಸಲಾತಿ ಹೆಚ್ಚಳ ಮಾಡಿದ್ದು, ಈ ಮೀಸಲಾತಿ ತೀರ್ಮಾನಗಳು ಹೇಗೆ ಜಾರಿಗೆ ಬರಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಈ ಸರಕಾರ ಎಲ್ಲ ವರ್ಗಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುವ ಪ್ರಯತ್ನ. ಒಕ್ಕಲಿಗ ಹಾಗೂ ಲಿಂಗಾಯತರನ್ನು ಮುಸ್ಲಿಮರ ವಿರುದ್ದ ಎತ್ತಿ ಕಟ್ಟುವುದು, ಪರಿಶಿಷ್ಟ ಸಮುದಾಯಗಳ ನಡುವೆ ಪರಸ್ಪರ ಕಚ್ಚಾಟ ತರುವುದು ಬಿಜೆಪಿ ಸರಕಾರದ ಪ್ರಯತ್ನ ಎಂದು ಟೀಕಿಸಿದರು.

Similar News