ನೆಹರೂ ಓಲೇಕಾರ್ ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ: 'ನೈಜ ಹೋರಾಟಗಾರರ ವೇದಿಕೆ'ಯಿಂದ ಆಗ್ರಹ

Update: 2023-03-27 17:44 GMT

ಬೆಂಗಳೂರು, ಮಾ.27: ನಕಲಿ ಬಿಲ್ ಪ್ರಕರಣದಲ್ಲಿ ದೋಷಿಯಾಗಿ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶವನ್ನು ಹೊರಡಿಸಬೇಕೆಂದು ನೈಜ ಹೋರಾಟಗಾರರ ವೇದಿಕೆಯು ಕರ್ನಾಟಕ ರಾಜ್ಯ ವಿಧಾನಸಭೆ ಕಾರ್ಯದರ್ಶಿ ಅವರಿಗೆ ಆಗ್ರಹಿಸಿದೆ.

ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯವು ನೆಹರೂ ಓಲೇಕಾರ್ ಅವರಿಗೆ ನಕಲಿ ಬಿಲ್ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಓಲೇಕಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 

ಉಚ್ಚನ್ಯಾಯಾಲಯವು ಓಲೇಕಾರ್‍ಗೆ ನೀಡಿದ್ದ ಜೈಲು ಶಿಕ್ಷೆಯ ತೀರ್ಪುನ್ನು ಅಮಾನತ್ತಿನಲ್ಲಿಟ್ಟು ಮತ್ತು ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು. ಈ ಮೇಲ್ಕಂಡ ವಿಷಯ, ಉಲ್ಲೇಖದಂತೆ ನ್ಯಾಯಾಲಯದ ತೀರ್ಪು ಮತ್ತು ಆದೇಶಗಳನ್ನು ಅನುಸರಿಸಿ ಹಾವೇರಿ ವಿಧಾನಸಭಾ ಸದಸ್ಯ ನೆಹರೂ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ವೇದಿಕೆಯ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರು ಒತ್ತಾಯಿಸಿದ್ದಾರೆ. 

ಓಲೇಕಾರ್‍ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಆದೇಶ ಜಾರಿಗೊಳಿಸದಿರುವುದು ಹಲವಾರು ಅನುಮಾನಗಳಿಗೆ ಎಡೆಯಾಗಿದೆ. ಹೀಗಾಗಿ, ಪ್ರಜಾ ಪ್ರತಿನಿಧಿ ಕಾಯ್ದೆ, 1951 ಕಾಲಂ 8(3)ರ ಪ್ರಕಾರ 2023ರ ಮಾ.13ರಿಂದ ಜಾರಿಗೆ ಬರುವಂತೆ ಓಲೇಕಾರ್‍ರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ಆದೇಶವನ್ನು ಹೊರಡಿಸಬೇಕೆಂದು ವೇದಿಕೆಯ ಆಗ್ರಹಿಸಿದೆ. 
  

Similar News