ಮುಸ್ಲಿಮರ ಮೀಸಲಾತಿ ಹಕ್ಕು ಪಡೆಯಲು ಕಾನೂನು ಹೋರಾಟ: ಯು.ಟಿ.ಖಾದರ್

Update: 2023-03-28 12:19 GMT

ಬೆಂಗಳೂರು, ಮಾ.28: ‘ಸಂವಿಧಾನಬದ್ಧವಾಗಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ಕಲ್ಪಿಸಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಪುನಃ ಪಡೆಯಲು ಕಾನೂನು ಹೋರಾಟ ನಡೆಸಲಾಗುವುದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯಸಭೆಯ ಮಾಜಿ ಉಪಸಭಾಪತಿ ಡಾ.ಕೆ.ರಹ್ಮಾನ್ ಖಾನ್ ನೇತೃತ್ವದಲ್ಲಿ ಉಲಮಾಗಳು ಹಾಗೂ ರಾಜಕೀಯ ನಾಯಕರು ಸಮಾಲೋಚನೆಗಳನ್ನು ನಡೆಸುತ್ತಿದ್ದು, ಮುಸ್ಲಿಮರ ಹಕ್ಕುಗಳನ್ನು ಪಡೆಯಲು ಕಾನೂನು ಹೋರಾಟ ನಡೆಸಲಾಗುವುದು’ ಎಂದರು.

ಬಿಜೆಪಿ ಸರಕಾರ ಮೀಸಲಾತಿಯನ್ನು ಗೊಂದಲಮಯವಾಗಿಸಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ಪ್ರಬಲ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಹಂಚಿಕೆ ಮಾಡಲಾಗಿದೆ. ಈ ವರ್ಗಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಒಂದು ಸಮುದಾಯದ ಹಕ್ಕನ್ನು ಕಸಿದು ಮತ್ತೊಬ್ಬರಿಗೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಖಾದರ್ ಪ್ರಶ್ನಿಸಿದರು.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 120 ಸಣ್ಣ ಸಣ್ಣ ಸಮುದಾಯಗಳಿವೆ. ಅವುಗಳಿಗೆ ಶೇ.1ರಷ್ಟು ಮೀಸಲಾತಿ ಹೆಚ್ಚಳ ಮಾಡಿಲ್ಲ. ರಾಜಕೀಯ ದುರುದ್ದೇಶದಿಂದ ಯಾವುದೆ ಚರ್ಚೆಯಿಲ್ಲದೆ ಸಂಪುಟ ಸಭೆಯಲ್ಲಿ ಮೀಸಲಾತಿ ಕುರಿತು ತೀರ್ಮಾನ ಕೈಗೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಎಲ್ಲರೂ ಸೇರಿ ಸಮಾಜದಲ್ಲಿ ಗೊಂದಲದ, ದ್ವೇಷದ ವಾತಾವರಣ ನಿರ್ಮಿಸಿರುವ ಈ ಬಿಜೆಪಿ ಸರಕಾರವನ್ನು ಸೋಲಿಸಬೇಕು. ಮುಂದಿನ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು, ಎಲ್ಲ ಸಮಾಜಗಳಿಗೂ ಸಾಮಾಜಿಕ ನ್ಯಾಯ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಲ್ಲಿ ಈಗ ಮೀಸಲಾತಿ ಶೇ.56ರಷ್ಟು ಆಗಿದೆ. ಮೀಸಲಾತಿಯ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೀಸಲಾತಿ ಹೆಚ್ಚಳವಾದಲ್ಲಿ ಅದನ್ನು ಸಂವಿಧಾನ ಶೆಡ್ಯೂಲ್ 9ಕ್ಕೆ ಸೇರಿಸಬೇಕು. ಆದರೆ, ಬಿಜೆಪಿ ಸರಕಾರ ಈ ವರೆಗೆ ಆ ಕೆಲಸವನ್ನು ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 2019ರಲ್ಲಿ ಕೋಲಾರದ ಚುನಾವಣಾ ಪ್ರಚಾರದ ಭಾಷಣದಲ್ಲಿ ಆಡಿದ ಮಾತುಗಳನ್ನಾಧರಿಸಿ ಗುಜರಾತ್‍ನಲ್ಲಿ ಪ್ರಕರಣ ದಾಖಲಿಸಲಾಯಿತು. ನಾಲ್ಕು ವರ್ಷಗಳಿಂದ ಈ ಪ್ರಕರಣ ಚರ್ಚೆಗೆ ಬಂದಿಲ್ಲ. ಈಗ ಸಂಸತ್ತಿನಲ್ಲಿ ಅದಾನಿ ಹಾಗೂ ಪ್ರಧಾನಿಯ ಸಂಬಂಧದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಂತೆ ಅವರ ವಿರುದ್ಧ ತ್ವರಿತಗತಿಯಲ್ಲಿ ವಿಚಾರಣೆ ನಡೆದು ಎರಡು ವರ್ಷಗಳ ಶಿಕ್ಷೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ನ್ಯಾಯಾಲಯವು ಆ ಎರಡು ವರ್ಷಗಳ ಶಿಕ್ಷೆಯನ್ನು ಒಂದು ತಿಂಗಳಮಟ್ಟಿಗೆ ಅಮಾನತ್ತಿನಲ್ಲಿಟ್ಟು ಜಾಮೀನು ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ, ಲೋಕಸಭಾ ಸ್ಪೀಕರ್ ಕಚೇರಿಯು ಶಿಕ್ಷೆ ಅಮಾನತ್ತಿನಲ್ಲಿರುವಾಗ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ಅನರ್ಹಗೊಳಿಸಿರುವುದು ಸಂವಿಧಾನಬಾಹಿರ ಕೃತ್ಯ ಎಂದು ಖಾದರ್ ವಾಗ್ದಾಳಿ ನಡೆಸಿದರು.

Similar News