ಬಿಬಿಎಂಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ATM: ಕುಮಾರಸ್ವಾಮಿ

Update: 2023-03-28 13:59 GMT

ಬೆಂಗಳೂರು, ಮಾ.28: ‘ಹದಿನೈದು ವರ್ಷಗಳಿಂದ ಬೆಂಗಳೂರು ನಗರದ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಿಬಿಎಂಪಿಯನ್ನು ಎಟಿಎಂ ಮಾಡಿಕೊಂಡಿದ್ದು, ಲೂಟಿ ಮಾಡಿದ ಹಣದಲ್ಲಿ ಕುಕ್ಕರ್ ಮತ್ತು ಸೀರೆಯನ್ನು ಹಂಚುತ್ತಿವೆ. ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ದುರಾಡಳಿತಕ್ಕೆ ಜೆಡಿಎಸ್ ಇತಿಶ್ರೀ ಹಾಡಲಿದೆ’ ಎಂದು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಮಂಗಳವಾರ ನಗರದ ಹೆಬ್ಬಾಳದಲ್ಲಿ ಆಯೋಜಿಸಿದ್ದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಉರಿಗೌಡ, ನಂಜೇಗೌಡ ಎಂದು ವಿವಾದ ಎಬ್ಬಿಸುತ್ತಿರುವ ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ಮಾಡಿದರೂ, ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಅಭಿವೃದ್ದಿ ಬಗ್ಗೆ ಬಿಜೆಪಿಯವರಿಗೆ ಚರ್ಚೆ ಮಾಡಲು ಯಾವುದೇ ಸರಕು ಇಲ್ಲ. ಇದರಿಂದ ಇಂತಹ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ನಂತಹ ವಿಷಯಗಳನ್ನು ಮುಂದಕ್ಕೆ ತರುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಂದು ಜನರನ್ನು ಕೆರಳಿಸುತ್ತಾರೆ. ಆದರೆ ವಿವಾದಗಳ ಕುರಿತು ಚರ್ಚೆ ಮಾಡದೇ ಪಲಾಯನ ಮಾಡುತ್ತಾರೆ ಎಂದರು.

ಹೆಬ್ಬಾಳ ಕ್ಷೇತ್ರಕ್ಕೆ ಜೆಡಿಎಸ್ ವಿದ್ಯಾವಂತ, ಪ್ರಾಮಾಣಿಕ ಒಳ್ಳೆ ದೂರ ದೃಷ್ಟಿವುಳ್ಳ ಯುವ ನಾಯಕನನ್ನು ಕಣಕ್ಕಿಳಿಸಿದೆ. ನಿಮಗೆ ಅಭಿವೃದ್ಧಿ ಬೇಕಾ ಅಥವಾ ಬರೀ ಕುಕ್ಕರ್, ಸೀರೆ ಕೊಟ್ಟು ತೃಪ್ತಿ ಪಡಿಸೋ ನಾಯಕರು ಬೇಕೋ ಎನ್ನುವುದನ್ನು ಹೆಬ್ಬಾಳದ ಜನತೆ ನಿರ್ಧರಿಸಿಬೇಕು. ಈ ಬಾರಿ ಕ್ಷೇತ್ರದಿಂದ ಡಾ. ಸಯ್ಯದ್ ಮೋಹಿದ್ ಅಲ್ತಾಫ್ ಅವರನ್ನು ಗೆಲ್ಲಿಸಿ ನನಗೆ ಇನ್ನಷ್ಟು ಶಕ್ತಿ ತುಂಬುವಂತೆ ಅವರು ಮನವಿ ಮಾಡಿದರು. 

ಕಾರ್ಯಕ್ರಮದಲ್ಲಿ ಹೆಬ್ಬಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಯ್ಯದ್ ಮೋಹಿದ್ ಅಲ್ತಾಫ್, ಜೆಡಿಎಸ್‍ನ ರಾಷ್ಟ್ರೀಯ ಉಪಾಧ್ಯಕ್ಷ ಉಬೇದುಲ್ಲಾ ಖಾನ್ ಆಜ್ಮಿ ಸೇರಿ ಇನ್ನಿತರ ಜೆಡಿಎಸ್‍ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Similar News