‘ನಂದಿನಿಯನ್ನು ರಕ್ಷಿಸಿ, ಕೆಎಂಎಫ್ ಕಾಪಾಡಿ’: ಕುಮಾರಸ್ವಾಮಿಗೆ ವಿಶೇಷ ಹಾರದ ಮೂಲಕ ಮನವಿ

Update: 2023-03-28 15:41 GMT

ಬೆಂಗಳೂರು, ಮಾ. 28: ಪಂಚರತ್ನ ರಥಯಾತ್ರೆ ಕೈಗೊಂಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ತಿಪ್ಪೇನಹಳ್ಳಿಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ವಿಶೇಷ ಹಾರವೊಂದನ್ನು ಹಾಕುವ ಮೂಲಕ ‘ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳಿ(ಕೆಎಂಎಫ್)’ ಉಳಿಸಲು ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಕ್ಷೇತ್ರದಲ್ಲಿ ‘ಗುಜರಾತಿಗಳಿಂದ ಕನ್ನಡಿಗರ ಕೆಎಂಎಫ್ ಅನ್ನು ಉಳಿಸಿ’ ಎಂಬ ಬ್ಯಾನರ್ ಇದ್ದ ನಂದಿನಿ ಹಾಲು ಮತ್ತು ಮೊಸರಿನ ಪ್ಯಾಕೆಟ್‍ಗಳಿಂದ ತಯಾರಿಸಲಾಗಿದ್ದ ಬೃಹತ್ ಹಾರವೊಂದನ್ನು ಎಚ್. ಡಿ. ಕುಮಾರಸ್ವಾಮಿ ಅವರಿಗೆ ಹಾಕಲಾಯಿತು.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ನಂದಿನಿಯನ್ನು ರಕ್ಷಿಸಿ, ಕೆಎಂಎಫ್ ಕಾಪಾಡಿ.. ಎನ್ನುವ ಕಾಳಜಿಯೊಂದಿಗೆ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು. ವಿಶೇಷ ಹಾರ ತಯಾರಿಸಿ ಹಾಕಿ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದರ ಜತೆಗೆ, ನಮ್ಮ ನಾಡಿನ ರೈತರ ಜೀವನಾಡಿ ಆಗಿರುವ ನಂದಿನಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಮಾತು ಕೊಡುತ್ತೇನೆ. ಜನರು ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ವಿನಂತಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ಈ ಹಿಂದೆ ಕೆಎಂಎಫ್ ಅನ್ನು ಗುಜರಾತಿನ ಅಮೂಲ್ ಜತೆ ವಿಲೀನ ಮಾಡಲಾಗುವುದು ಎಂಬ ಪ್ರಸ್ತಾವ ಕೇಳಿ ಬಂದಿತ್ತು. ಅಲ್ಲದೆ, ಕೆಎಂಎಫ್ ಸಿಬ್ಬಂದಿ ನೇಮಕಾತಿಗೆ ಗುಜರಾತ್ ಮೂಲದ ಕಂಪೆನಿಯೊಂದಕ್ಕೆ ವಹಿಸಿದ್ದಲ್ಲದೆ, ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂಬ ಹಿಂದಿಯ ಉಲ್ಲೇಖವೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Similar News