ಕೊಣಾಜೆ: ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ

Update: 2023-03-29 12:33 GMT

ಕೊಣಾಜೆ: ನಡುಪದವು ಕ್ರಾಸ್  ಬಳಿ ಸುಮಾರು 83.56 ಕೋಟಿ ವೆಚ್ಚದಲ್ಲಿ 1000 ವಿದ್ಯಾರ್ಥಿಗಳ ವಾಸ್ತವ್ಯ ಸಾಮರ್ಥ್ಯದ 'ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ' ಕಟ್ಟಡಕ್ಕೆ  ಶಾಸಕ ಯು.ಟಿ.ಖಾದರ್ ಅವರು ಬುಧವಾರ ಶಿಲಾನ್ಯಾಸಗೈದರು.

ಬಳಿಕ ಮಾತನಾಡಿದ ಅವರು,‌ ಮಂಗಳೂರು ಭಾಗದಲ್ಲಿ ವಿದ್ಯಾರ್ಥಿ ನಿಲಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಹೊಸ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುತ್ತಿದ್ದು ಇಲ್ಲಿ  ಪ್ರೌಢಶಾಲೆ, ಸ್ನಾತಕೋತ್ತರವರೆಗಿನ  500 ವಿದ್ಯಾರ್ಥಿಗಳು ಮತ್ತು 500 ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. 

ಕೇಂದ್ರಿಕೃವಾಗಿ ನಿರ್ಮಾಣವಾಗಲಿರುವ ಈ  ವಿದ್ಯಾರ್ಥಿ ನಿಲಯ ಅತ್ಯುತ್ತಮ ಮತ್ತು ಆಧುನಿಕ ವ್ಯವಸ್ಥೆಯಿಂದ ಕೂಡಿರಲಿದೆ. ಮಂಗಳೂರು ಮಾತ್ರವಲ್ಲದೆ ಇತರ ಊರಿನ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಈ ಹಾಸ್ಟೆಲ್ ಪ್ರದೇಶಾಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಲಿದ್ದು, ಸಮಾಜಕ್ಕೆ ಪೂರಕ ಯೋಜನೆಯಾಗಲಿದೆ ಎಂದು ತಿಳಿಸಿದರು.

ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ, ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ, ಪಂಚಾಯತಿ ಸದಸ್ಯರಾದ‌ ದೇವಣ್ಣ ಶೆಟ್ಟಿ, ಬಿಸಿಎಂ ಹಾಸ್ಟೆಲ್ ನಿರ್ದೇಶಕರಾದ ಪ್ರದೀಪ್ ಡಿಸೋಜ, ಚಂದ್ರಶೇಖರ್ ಮಯ್ಯ, ಇಂಜಿನಿಯರ್ ದಾಸ್ ಪ್ರಕಾಶ್,  ಮುಖಂಡರಾದ ಇಬ್ರಾಹಿಂ ಹಾಜಿ, ಅಬ್ದುಲ್ ಖಾದರ್ ಟಿ.ಆರ್,  ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಸೀರ್ ನಡುಪದವು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಸ್ಥಳೀಯರಾದ ಪ್ರೊ.ಕೈಸರ್ ಖಾನ್, ಸುಧಾಕರ ಶೆಟ್ಟಿ, ಬಶೀರ್ ಕೆ.ಪಿ.ಎ, ಎ.ಕೆ.ರಹಿಮಾನ್ ಕೋಡಿಜಾಲ್, ಶಾಫಿಹಾಜಿ, ಚಂದ್ರಹಾಸ ನಡುಪದವು‌‌, ಮೊಯ್ದಿನ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.

ಕೊಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಸ್ವಾಗತಿಸಿದರು.

Similar News