‘ಚೆಕ್‍ಪೋಸ್ಟ್’ ತಪಾಸಣೆ ನೆಪದಲ್ಲಿ ರೈತರು, ಸಾಮಾನ್ಯರಿಗೆ ಕಿರುಕುಳ ಆಗಬಾರದು: ಎಚ್.ಡಿ. ಕುಮಾರಸ್ವಾಮಿ

‘ಒಂದೇ ಹಂತದ ಚುನಾವಣೆಗೆ ಜೆಡಿಎಸ್ ಸ್ವಾಗತ’

Update: 2023-03-29 18:30 GMT

ಬೆಂಗಳೂರು, ಮಾ. 29: ‘ರಾಜ್ಯದ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಇದೊಂದು ರಾಜಕೀಯ ಪ್ರಕ್ರಿಯೆ ಅಷ್ಟೇ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ 5 ವರ್ಷಗಳಿಗೆ ಒಮ್ಮೆ ನಡೆಯುವ ಪ್ರಕ್ರಿಯೆ. ಒಂದು ವಾರದಿಂದ ಆಯೋಗದಿಂದ ಚುನಾವಣಾ ದಿನಾಂಕ ಪ್ರಕಟವಾಗುವ ನಿರೀಕ್ಷೆ ಇತ್ತು, ಅದು ಈಗ ಘೋಷಣೆ ಆಗಿದೆ.

ಎಲ್ಲರೂ ಚುನಾವಣೆಯ ಪಾವಿತ್ರ್ಯತೆ, ಪಾರದರ್ಶಕತೆ ಕಾಪಾಡುವುದರ ಎಲ್ಲ್ಲ ಪಕ್ಷಗಳು ಹೇಳಿವೆ. ಆದರೆ, ಕಳೆದ ಹಲವು ದಿನಗಳಿಂದ ಹಲವು ಪಕ್ಷಗಳು ಮತದಾರರಿಗೆ ಆಮಿಷ ಒಡ್ಡುತ್ತಿವೆ. ಸಂಬಂಧಪಟ್ಟವರು ಅವರನ್ನು ಹಿಡಿಯುವ ಕೆಲಸ ಮಾಡಿದ್ದಾರೆ. ಇದರಲ್ಲಿ ರಾಷ್ಟ್ರೀಯ ಪಕ್ಷಗಳು ದೊಡ್ಡ ಮಟ್ಟದಲ್ಲಿ ವಾಚ್, ತವಾ, ಕುಕ್ಕರ್ ಸೇರಿ ಹಲವು ವಸ್ತುಗಳನ್ನು ಹಂಚಿದ್ದಾರೆ ಎಂದು ದೂರಿದರು.

ಇಷ್ಟು ಪ್ರಮಾಣದಲ್ಲಿ ವಸ್ತುಗಳನ್ನು ವಶಕ್ಕೆ ಪಡೆದ ಮೇಲೆಯೂ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಈ ವ್ಯವಸ್ಥೆಯಲ್ಲಿ ಅವಕಾಶ ಇದೆ. ಇದು ಅಚ್ಚರಿ ಉಂಟು ಮಾಡುತ್ತಿದೆ. ಭ್ರಷ್ಟಾಚಾರ ಮುಕ್ತ ಅನ್ನೋದು ಹೇಳೋದು ಸುಲಭ, ಆಚರಣೆ ಕಷ್ಟ ಎನ್ನುವುದು ಇದರಿಂದ ಅರ್ಥ ಆಗುತ್ತದೆ ಎಂದರು ಕುಮಾರಸ್ವಾಮಿ ದೂರಿದರು.

ರೈತರಿಗೆ ತೊಂದರೆ ಆಗಬಾರದು: ಆಯೋಗದ ಸೂಚನೆ ಮೇರೆಗೆ ಎಲ್ಲ ಕಡೆ ಚೆಕ್ ಪೋಸ್ಟ್ ಹಾಕಲಾಗಿದೆ. ಅದು ಒಳ್ಳೆಯ ಬೆಳವಣಿಗೆ. ಆದರೆ, ಕೆಲವು ಬಾರಿ ಸಾರ್ವಜನಿಕರು ಸ್ವಂತ ಕೆಲಸಗಳಿಗೆ ಹಣ ತೆಗೆದುಕೊಂಡು ಹೋಗ್ತಾರೆ. ಅಂಥವರನ್ನು ಹಿಡಿದು ಹಣದ ದಾಖಲೆ ಕೇಳಿದರೆ ಹೇಗೆ? ಅದನ್ನು ಆಯೋಗ ಮಾಡಬಾರದು. ರೈತರು, ಆಸ್ಪತ್ರೆಗಳಿಗೆ ಹೋಗುವವರಿಗೆ ತೊಂದರೆ ಕೊಡಬಾರದು ಎನ್ನುವುದು ನನ್ನ ಕಳಕಳಿ. ಜನ ಸಾಮಾನ್ಯರಿಗೆ ತೊಂದರೆ ಆಗಬಾರದು. ಪ್ರಧಾನಿ ನೋಡಿದರೆ ಯುದ್ಧೋಪಾದಿಯಲ್ಲಿ ಭ್ರಷ್ಟಾಚಾರ ನಿಂತಿದೆ ಅಂತಾರೆ. ಎಲ್ಲಿ ನಿಂತಿದೆ? ಅಮಾಯಕರು ಬಲಿಯಾಗಬಾರದು ಎಂದರು.

ಜೆಡಿಎಸ್ ಸಿದ್ಧ: ಚುನಾವಣೆಗೆ ಜೆಡಿಎಸ್ ಪಕ್ಷದ ಸಿದ್ಧತೆ ಶೇ.50-60ರಷ್ಟು ತಯಾರಿ ಮುಗಿದಿದೆ. ಇನ್ನೆರಡು ದಿನದಲ್ಲಿ ಎರಡನೆ ಪಟ್ಟಿಯೂ ಹೊರಬರಲಿದೆ. ನಾಮಪತ್ರ ಪ್ರಕ್ರಿಯೆಗೆ ನಮ್ಮ ಅಭ್ಯರ್ಥಿಗಳು ಸಿದ್ಧರಿದ್ದಾರೆ. 123 ಕ್ಷೇತ್ರಗಳಲ್ಲಿ ಗೆಲ್ಲುವ ನಮ್ಮ ಗುರಿ ಈಡೇರುತ್ತದೆ ಎನ್ನುವ ಅಚಲ ನಂಬಿಕೆ ನನಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ: ‘ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುವ ಅಗತ್ಯ ಇಲ್ಲ. ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಲು ಪಕ್ಷದಲ್ಲಿ ನಿರ್ಧಾರ ಆಗಿದೆ. ಆದರೆ, ಮಂಡ್ಯಕ್ಕೆ ಬರುವಂತೆ ಕೆಲವರು ಕೇಳಿದ್ದು ನಿಜ. ಆದರೆ, ಚನ್ನಪಟ್ಟಣದ ಕಾರ್ಯಕರ್ತರಿಗೆ ಅದರಿಂದ ಬೇರೆ ಸಂದೇಶ ಹೋಗುತ್ತದೆ. ಹಾಗೆ ಆಗುವುದು ಬೇಡ. ಹೀಗಾಗಿ ನಾನು ಒಂದೇ ಕಡೆ ಸ್ಪರ್ಧೆ ಮಾಡುತ್ತೇನೆ. ಈ ಸ್ಪಷ್ಟನೆ ಇದೆ ನಮಗೆ’ ಎಂದು ಅವರು ತಿಳಿಸಿದರು.

ಇವಿಎಂ ಸಂಶಯ ನಿವಾರಣೆ ಆಗಲಿ: ‘ರಾಜ್ಯದಲ್ಲಿ ಹೊಸ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವ ಬಗ್ಗೆ ಚುನಾವಣಾ ಆಯೋಗ ಹೇಳಿದೆ. ಇವಿಎಂ ಬಗ್ಗೆ ಇರುವ ಅನುಮಾನ ನಿವಾರಣೆಯಾಗಬೇಕು. ಜನಸಾಮಾನ್ಯರಲ್ಲಿ ಇರುವ ಸಂಶಯವನ್ನು ನಿವಾರಿಸಬೇಕು’

-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

Similar News