ಮಂಗಳೂರು | ಬಸ್ ಢಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು

ಆಕ್ರೋಶಿತ ಸಾರ್ವಜನಿಕರಿಂದ ಪ್ರತಿಭಟನೆ

Update: 2023-03-30 10:36 GMT

ಮಂಗಳೂರು, ಮಾ.30: ರಸ್ತೆ ದಾಟುತ್ತಿದ್ದ ವೇಳೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಬೆಂದೂರ್ ವೆಲ್ ಬಳಿ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಂಭವಿಸಿದೆ.

 ಮೃತರನ್ನು ಐರಿನ್ ಡಿಸೋಜ(55) ಎಂದು ಗುರುತಿಸಲಾಗಿದೆ.

ಆ್ಯಗ್ನೆಸ್ ಸರ್ಕಲ್ ಕಡೆಯಿಂದ ಬಂದ ಸಿಟಿ ಬಸ್ ಬೆಂದೂರ್ ವೆಲ್ ಜಂಕ್ಷನ್ ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದೆ. ಈ ವೇಳೆ ಅದೇ ಬಸ್ಸಿನಿಂದ ಇಳಿದು ಬಸ್ಸಿನ ಮುಂಭಾಗದಿಂದ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಐರಿನ್ ಅವರ ಮೈಮೇಲೆ ಬಸ್ಸಿನ ಮುಂಭಾಗದ ಚಕ್ರ ಹರಿದಿದೆ. ಇದರಿಂದ ತೀವ್ರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.

ಸಾರ್ವಜನಿಕರ ಪ್ರತಿಭಟನೆ

ಅಪಘಾತದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರದೇಶದಲ್ಲಿ ಪದೇಪದೇ ಅಪಘಾತವಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಪೊಲೀಸ್ ಆಯುಕ್ತರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

ಮಾಜಿ ಶಾಸಕ ಮೊಯ್ದಿನ್ ಬಾವಾ, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ ಮತ್ತಿತರರು ಸಾರ್ವಜನಿಕರ ಬೇಡಿಕೆಗೆ ಧ್ವನಿಗೂಡಿಸಿದರು.

ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಧಾವಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಂದೂರುವೆಲ್ ಜಂಕ್ಷನ್ ನಲ್ಲಿ ಒಂದು ವಾರದೊಳಗೆ ರಸ್ತೆ ಅಪಘಾತಕ್ಕೆ ಸಾವನ್ನಪ್ಪಿದ 2ನೇ ಪ್ರಕರಣ ಇದಾಗಿದೆ. ಮಾರ್ಚ್ 24ರಂದು ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ತಾಯಿ ಜೊತೆ ದ್ವಿಚಕ್ರ ವಾಹನದಲ್ಲಿದ್ದ 11 ವರ್ಷದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

Similar News