ಸಮಗ್ರ ಶಿಕ್ಷಾ ಯೋಜನೆಗೆ ಕೇಂದ್ರದ ನಿರಾಸಕ್ತಿ?: ಫೆಬ್ರವರಿವರೆಗೆ ಘೋಷಿತ ಅನುದಾನ ಶೇ.50ರಷ್ಟು ಮಾತ್ರ ಬಿಡುಗಡೆ

Update: 2023-03-30 16:35 GMT

ಹೊಸದಿಲ್ಲಿ,ಮಾ.30: 2022-23ರ ವಿತ್ತೀಯ ವರ್ಷ ಅಂತ್ಯಗೊಳ್ಳಲು ಎರಡು ದಿನಗಳು ಉಳಿದಿರುವಂತೆಯೇ ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯವು ನಡೆಸುತ್ತಿರುವ ಸಮಗ್ರ ಶಿಕ್ಷಣ ಯೋಜನೆಗೆ ಫೆಬ್ರವರಿ ತಿಂಗಳವರೆಗೆ ಘೋಷಿತ ಅನುದಾನ ನಿಧಿಯ ಕೇವಲ 50ರಷ್ಟನ್ನು ಮಾತ್ರವೇ ಬಿಡುಗಡೆಗೊಳಿಸಿರುವುದು ಈಗ ಬೆಳಕಿಗೆ ಬಂದಿದೆ.

ಕೇಂದ್ರ ಸರಕಾರದ ಶಾಲಾ ಶಿಕ್ಷಣ ಯೋಜನೆಯಾದ ‘ಸಮಗ್ರ ಶಿಕ್ಷಾ’ವನ್ನು 2018ರ ಎಪ್ರಿಲ್‌ನಲ್ಲಿ ಆರಂಭಿಸಲಾಗಿತ್ತು. 2009ರಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕಿನ ಅನುಷ್ಠಾನವು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

2022-23ನೇ ಸಾಲಿನಲ್ಲಿ ಸಮಗ್ರ ಶಿಕ್ಷಾ ಯೋಜನೆಗೆ 37,383 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆದರೆ ಈ ಯೋಜನೆಯಡಿ ಈ ವರ್ಷದ ಫೆಬ್ರವರಿ 9ರವರೆಗೆ ಕೇಂದ್ರ ಸರಕಾರವು ರಾಜ್ಯಗಳಿಗೆ 19,709 ಕೋಟಿ ರೂ. (52 ಶೇ.) ಮಾತ್ರವೇ ಬಿಡುಗಡೆಗೊಳಿಸಿದೆ ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಬಾಕಿ ಹಣವನ್ನು ಒದಗಿಸಲು ಸಚಿವಾಲಯವು ತೀವ್ರವಾಗಿ ಶ್ರಮಿಸುತ್ತಿದೆ. ಶೇ.85ರಿಂದ ಹಾಗೂ ಶೇ.90ರಷ್ಟು ಹಣವನ್ನು ಕೆಲವು ರಾಜ್ಯಗಳಿಗೆ ಬಿಡುಗಡೆಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್19 ಸಾಂಕ್ರಾಮಿಕದ ಪರಿಣಾಮವಾಗಿ, ಕೌಟುಂಬಿಕ ಆದಾಯಗಳಿಗೆ ಗಣನೀಯ ಹೊಡೆತವುಂಟಾಗಿತ್ತು. ಇದರ ಪರಿಣಾಮವಾಗಿ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 87 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ನೋಂದಣಿಯಾಗಿದೆ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯಲ್ಲಿ 95 ಲಕ್ಷದಷ್ಟು ಕಡಿಮೆಯಾಗಿದೆ.

ಆದಾಗ್ಯೂ ಸರಕಾರಿ ಶಾಲೆಗಳನ್ನು ಬಲಪಡಿಸುವಲ್ಲಿ ರಾಜ್ಯ ಸರಕಾರಗಳ ಸಾಮರ್ಥ್ಯಗಳ ಬಳಕೆ ಇನ್ನೂ ಕಡಿಮೆ ಮಟ್ಟದಲ್ಲೇ ಇದೆ ಎಂದು ವರದಿ ತಿಳಿಸಿದೆ.

ಸಮಗ್ರ ಶಿಕ್ಷಾ ನಿಧಿಯ ಬಜೆಟ್ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆಗೊಳಿಸದೆ ಇರುವುದರಿಂದ ಶಾಲೆಗಳ ಮಾಹಿತಿ ಸವಂಹನ ಹಾಗೂ ತಂತ್ರಜ್ಞಾನ ವ್ಯವಸ್ಥೆಗೆ ತೀವ್ರವಾಗಿ ಬಾಧಿತವಾಗಿದೆ .ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಂಪ್ಯೂಟರ್‌ಗಳು ಹಾಗೂ ಇಂಟರ್‌ನೆಟ್ ಸಂಪರ್ಕದ ಲಭ್ಯತೆ ಪ್ರಮಾಣ ಶೇ.33ರಷ್ಟಿದ್ದು, ಅತ್ಯಂತ ಕೆಳಮಟ್ಟದಲ್ಲಿದೆ. 2021-22ನೇ ಸಾಲಿನಲ್ಲಿ ಕೇವಲ 26 ಶೇ. ಸರಕಾರಿ ಮತ್ತು ಅನುದಾನಿತ ಶಾಲೆಗಳು ಇಂಟರ್‌ನೆಟ್ ಸಂಪರ್ಕವನ್ನು ಹೊಂದಿದ್ದವು. ಅಸ್ಸಾಂ ಹಾಗೂ ತೆಲಂಗಾಣದಲ್ಲಿ ಕೇವಲ 10 ಶೇ.ರಷ್ಟು ಸರಕಾರಿ, ಅನುದಾನಿತ ಶಾಲೆಗಳಿಗೆ ಮಾತ್ರವೇ ಇಂಟರ್‌ನೆಟ್ ಸಂಪರ್ಕವಿದ್ದರೆ, ಒಡಿಶಾ ಹಾಗೂ ಬಿಹಾರದಲ್ಲಿ ಕ್ರಮವಾಗಿ ಶೇ.9 ಹಾಗೂ ಶೇ.6ರಷ್ಟು ಇಂಟರ್‌ನೆಟ್ ಸೌಲಭ್ಯವಿದೆ’’ ಎಂದು ನೀತಿ ಹಾಗೂ ವಿಶ್ಲೇಷಣೆಗಾಗಿನ ಕೇಂದ್ರವು ಸಲ್ಲಿಸಿದ ವರದಿಯಿಂದ ಬೆಳಕಿಗೆ ಬಂದಿರುವುದಾಗಿ ದಿ ಹಿಂದೂ ವರದಿ ತಿಳಿಸಿದೆ.

ಸಮಗ್ರ ಶಿಕ್ಷಾ ಯೋಜನೆಯನ್ನು 2021-22ರಿಂದ 2025-26ನೇ ಹಣಕಾಸು ವರ್ಷದವರೆಗೆ ಜಾರಿಯಲ್ಲಿರಲಿದ್ದು, ಅದಕ್ಕಾಗಿ 2,94,283 ಕೋಟಿ ರೂ. ಬಜೆಟ್ ಗಾತ್ರವನ್ನು ನಿಗದಿಪಡಿಸಲಾಗಿತ್ತು. ಇದರಕ್ಕೆ ಕೇಂದ್ರ ಸರಕಾರ ನೀಡಬೇಕಾದ ಪಾಲು 1,85,398 ಕೋಟಿ ರೂ. ಆಗಿದೆ. ಆದರೆ ಅನುದಾನದ ಬಿಡುಗಡೆ ಅತ್ಯಂತ ಕೆಳಮಟ್ಟದಲ್ಲಿದೆ. ಯೋಜನೆಯ ಅನುಷ್ಠಾನದ ಮೊದಲ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರವು ತನ್ನ ಪಾಲಿನ ಅನುದಾನದ 54 ಶೇಕಡದಷ್ಟನ್ನು ಮಾತ್ರವೇ ಬಿಡುಗಡೆಗೊಳಿಸಿದೆ.

ಸಮಗ್ರ ಶಿಕ್ಷಾ ಯೋಜನೆಗಾಗಿ ತಮಗೆ ಈ ಹಿಂದೆ ಬಿಡುಗಡೆಗೊಳಿಸಲಾಗಿದ್ದ ಅನುದಾನವನ್ನು ಹರ್ಯಾಣ ಹಾಗೂ ಉತ್ತರಪ್ರದೇಶ ಸಮರ್ಪಕವಾಗಿ ಬಳಸಿಕೊಂಡಿರಲಿಲ್ಲ. ಈ ಬಾರಿ ಅವು ಕ್ರಮವಾಗಿಅನುಮೋದಿಸಲಾದ ಮೊತ್ತದ ಶೇ.27 ಹಾಗೂ ಶೇ.36ರಷ್ಟು ಅನುದಾನವನ್ನು ಮಾತ್ರವೇ ಪಡೆದುಕೊಂಡಿವೆ. ಇತ್ತ ಮಹಾರಾಷ್ಟ್ರವು ಈ ಯೋಜನೆಯಡಿ ಚಿಕ್ಕಾಸು ಹಣವನ್ನು ಪಡೆದಿಲ್ಲ. 2021-22ನೇ ಸಾಲಿನಲ್ಲಿ ಆ ರಾಜ್ಯವು ಸಮಗ್ರ ಶಿಕ್ಷಾ ಯೋಜನೆಯ ಅನುದಾನವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ (ಶೇ.37) ವ್ಯಯಿಸಿತ್ತು.

Similar News