ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮಗಳ ಬಗ್ಗೆ ಕಣ್ಗಾವಲು: ಅಭಿಷೇಕ್

Update: 2023-03-31 12:02 GMT

ಮಂಗಳೂರು, ಮಾ.31: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ ನಡೆಸುವ ಸಲುವಾಗಿ ಚುನಾವಣಾ ಅಕ್ರಮಗಳ ಮೇಲೆ ಕಟ್ಟುನಿಟ್ಟನ ನಿಗಾ ಇರಿಸಲು ಕ್ಷೇತ್ರದಲ್ಲಿ  ಮೂರು ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಕ್ರಮಗಳ ಬಗ್ಗೆ ವಿಶೇಷ ಕಣ್ಗಾವಲಿರಿಸಲಾಗಿದೆ ಎಂದು  ಕ್ಷೇತ್ರದ ಚುನಾವಣಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ.

ಮಂಗಳೂರು ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮಗಳ ಬಗ್ಗೆ ಕಣ್ಗಾವಲಿರಿಸಲು ಕ್ಷೇತ್ರದಲ್ಲಿ 9 ಫ್ಲೈಯಿಂಗ್ ಸ್ಕ್ವಾಡ್‌ಗಳು, 9 ಸ್ಟ್ಯಾಟಿಕ್ ತಂಡಗಳೊಂದಿಗೆ ಮುಕ್ಕ, ಕೂಳೂರು, ಎಡಪದವಿನಲ್ಲಿ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಯಾವುದೇ ರೀತಿಯ ಚುನಾವಣಾ ಅಕ್ರಮಗಳ ಬಗ್ಗೆ ಕ್ಷೇತ್ರ ವ್ಯಾಪ್ತಿಯಲ್ಲಿ ವರದಿಯಾಗಿಲ್ಲ ಎಂದರು.

ಕ್ಷೇತ್ರದಲ್ಲಿ ನಡೆಯುವ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ತಾಲೂಕು ಕಂಟ್ರೋಲ್ ರೂಂ (0824-2220587) ಅಥವಾ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ದೂರು ನೀಡಿದ ಎರಡು ಗಂಟೆಯೊಳಗೆ ಕ್ರಮ ಆಗಲಿದೆ ಎಂದು ಅಭಿಷೇಕ್ ವಿವರಿಸಿದರು.

ಕ್ಷೇತ್ರದಲ್ಲಿ ಮಾ.30ರವರೆಗೆ ಒಟ್ಟು 2,42,186 ಮತದಾರರಿದ್ದು, ಕ್ಷೇತ್ರದ 99 ಕಡೆಗಳಲ್ಲಿ 244 ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಕ್ಷೇತ್ರದಲ್ಲಿ 3,033 ಯುವ ಮತದಾರರಿದ್ದು,  ಚುನಾವಣಾ ಆಯೋಗದ ನಿರ್ದೇಶನದಂತೆ ಈ ಬಾರಿ ಮನೆಯಿಂದಲೇ ಮತದಾನಕ್ಕೆ ಅರ್ಹತೆ ಪಡೆದಿರುವ 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 7,869 ಹಾಗೂ ವಿಶೇಷಚೇತನರ ಸಂಖ್ಯೆ 1,384 ಇದೆ. ಮನೆಯಿಂದಲೇ ಮತದಾನಕ್ಕೆ ಬಯಸುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಂದ ನಿಗದಿತ ನಮೂನೆ ಭರ್ತಿ ಮಾಡಿಸಿಕೊಂಡು ಗೌಪ್ಯವಾಗಿ ಅಂಚೆ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ರಾಜಕೀಯ ಪಕ್ಷಗಳು ನಡೆಸುವ ಮೆರವಣಿಗೆ, ಸಭೆ ಸಮಾರಂಭಗಳಿಗೆ ಏಕ ಗವಾಕ್ಷಿ ಸುವಿಧಾ ಆ್ಯಪ್‌ನಡಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಯಾವುದೇ ಅರ್ಜಿ ಬಂದಿಲ್ಲ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರ್ಜಿಗಳು ಬರುತ್ತಿದ್ದು, ಪರಿಶೀಲಿಸಿ ಅನುಮತಿ ನೀಡಲಾಗುತ್ತಿದೆ. ಮಾತ್ರವಲ್ಲದೆ ಕಾರ್ಯಕ್ರಮಗಳು ನಡೆಯುವಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ನಿಗಾ ಇರಿಸಿ ಖರ್ಚು ವೆಚ್ಚಗಳನ್ನೂ ಪರಿಶೀಲಿಸಲಿದೆ ಎಂದು ಅಭಿಷೇಕ್ ಹೇಳಿದರು.

ಕ್ಷೇತ್ರದಲ್ಲಿ ಈವರೆಗೆ 291 ವಿಐಪಿ ಮತದಾರರನ್ನು ಗುರುತಿಸಲಾಗಿದೆ. 5 ಮಂದಿ ಎನ್‌ಆರ್‌ಐ ಮತದಾರರಿದ್ದಾರೆ. ಸೇವಾ ಮತದಾರರ ಸಂಖ್ಯೆ 43 ಆಗಿದ್ದು, 11 ಮಂದಿ ಮಂಗಳಮುಖಿ ಮತದಾರರಿದ್ದಾರೆ. ಕ್ಷೇತ್ರದ ಲಿಂಗಾನು ಪಾತ 1,061 ಆಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಪ್ರಶಾಂತ್ ಪಾಟೀಲ್ ಹಾಗೂ ಆದಿನಾಥ್ ಉಪಸ್ಥಿತರಿದ್ದರು. 

Similar News