ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: 11,158 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್

Update: 2023-03-31 14:18 GMT

ಮಂಗಳೂರು, ಮಾ.31: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಕಾರಣಕ್ಕೆ 11,158 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 2,40,057 ಮತದಾರರಿದ್ದರೆ,  ಈ ಬಾರಿ 13,487  ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ 1,15,895 ಪುರುಷರು ಮತ್ತು 1,26,447 ಮಹಿಳೆಯರ ಸಹಿತ 2,42,888 ಮತದಾರರಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೆಂಪೇಗೌಡ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಳೆದ ಅವಧಿಯ ಚುನಾವಣೆ ಸಂದರ್ಭ 56  ಮಂದಿ ಲಿಂಗತ್ವ ಅಲ್ಪಸಂಖ್ಯಾತ (ಟ್ರಾನ್ಸ್‌ಜೆಂಡರ್) ಮತದಾರರಿದ್ದರೆ, ಈ ಬಾರಿ ಅವರ ಸಂಖ್ಯೆ 46ಕ್ಕೆ ಇಳಿಕೆಯಾಗಿದೆ ಎಂದರು.

ಲಂಚ, ಉಚಿತ ಉಡುಗೊರೆ, ಮದ್ಯ ವಿತರಣೆ, ಅನುಮತಿ ಪಡೆಯದೆ ಧ್ವನಿವರ್ಧಕ ಬಳಕೆ ಮುಂತಾದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಸಿ-ವಿಜಿಲ್ ಆ್ಯಪ್‌ನಲ್ಲಿ ದೂರು ದಾಖಲಿಸಬಹುದು. ದೂರುಗಳಿಗೆ ದಾಖಲೆಯಾಗಿ ವೀಡಿಯೋ, ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು ಎಂದು ತಿಳಿಸಿದರು.

ದೂರುಗಳು ಸಲ್ಲಿಕೆಯಾದ ಕೂಡಲೇ ಜಿಲ್ಲಾ ಕೇಂದ್ರದಲ್ಲಿರುವ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗುವುದು. ದೂರುದಾರರು ಇರುವ ಲೊಕೇಶನ್ ಪತ್ತೆಹಚ್ಚಿ ಅಲ್ಲಿಗೆ ಸಮೀಪದಲ್ಲಿ ಗಸ್ತಿನಲ್ಲಿರುವ ಅಧಿಕಾರಿಗಳ ತಂಡಕ್ಕೆ ದೂರು ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೆಂಪೇಗೌಡ ವಿವರಿಸಿದರು.

ಧ್ವನಿ ವರ್ಧಕ ಬಳಸಿ ರಾಜಕೀಯ ಕಾರ್ಯಕ್ರಮ/ಸಭೆ ಆಯೋಜಿಸಲು, ಪಕ್ಷದ ಚುನಾವಣಾ ಕಚೇರಿ ತೆರೆಯಲು, ವಾಹನ ಪರವಾನಗಿ ಪಡೆಯಲು, ಧ್ವನಿವರ್ಧಕ ಬಳಸಿ ಮೆರವಣಿಗೆ ಆಯೋಜಿಸಲು ‘ಸುವಿಧಾ’ದಲ್ಲಿ ಆನ್‌ಲೈನ್ ಮೂಲಕ ಪರವಾನಗಿ ಪಡೆಯಬೇಕು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಭೂತ, ಕೋಲ, ನೇಮ, ಉತ್ಸವ, ಮದುವೆ, ಔತಣ ಕಾರ್ಯಕ್ರಮ ಆಯೋಜಿಸಲು ಅವಕಾಶವಿದೆ. ಆದರೆ ಸಂಬಂಧಪಟ್ಟವರು ಚುನಾವಣಾ ಅಧಿಕಾರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಕ್ಷೇತ್ರದಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಮುಂಚಿತವಾಗಿ ಅನುಮತಿ ಪಡೆಯಬೇಕು. ಮೈಕ್, ಸ್ಪೀಕರ್, ಡಿ.ಜೆ. ಅಳವಡಿಸಲು ಪೊಲೀಸ್  ಇಲಾಖೆಯಿಂದ ಅನುಮತಿ ಬೇಕು ಎಂದು ಹೇಳಿದರು.

ಚುನಾವಣಾ ಪ್ರಚಾರಕ್ಕಾಗಿ ಧಾರ್ಮಿಕ ಸಂಸ್ಥೆಗಳನ್ನು ಉಪಯೋಗಿಸುವಂತಿಲ್ಲ. ಧರ್ಮ, ಜಾತಿ ಉಪಯೋಗಿಸಿ ಕೊಂಡು ಪ್ರಚಾರ ಮಾಡುವಂತಿಲ್ಲ ಎಂದು ಕೆಂಪೇಗೌಡ ಸ್ಪಷ್ಟಪಡಿಸಿದರು.

Similar News