ಮೊಸರಲ್ಲಿ ಕಲ್ಲಲ್ಲ, ಮೊಸರಿಗೇ ಕಲ್ಲು!

Update: 2023-04-01 03:53 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

‘ಹೆಸರಲ್ಲೇನಿದೆ?’ ಎನ್ನುತ್ತಾ ಕರ್ನಾಟಕದ ಹಲವು ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕುಗಳ ಜೊತೆಗೆ ಕೇಂದ್ರ ಸರಕಾರ ವಿಲೀನಗೊಳಿಸಿತು. ದಿಲ್ಲಿಯಲ್ಲಿ ಅದರ ವಿರುದ್ಧ ಧ್ವನಿಯೆತ್ತಬೇಕಾಗಿದ್ದ ಎಲ್ಲ ಸಂಸದರು ಬಾಯಿ ಮುಚ್ಚಿ ಒಪ್ಪಿಕೊಂಡರು. ಕರ್ನಾಟಕ ಅದರಲ್ಲೂ ಕರಾವಳಿಯ ರೈತರು, ವ್ಯಾಪಾರಿಗಳು ಕಟ್ಟಿನಿಲ್ಲಿಸಿದ್ದ ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳು ತಮ್ಮ ಸ್ವಂತಿಕೆಗಳನ್ನು ಕಳೆದುಕೊಂಡು ಇಲ್ಲವಾದವು. ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳ ಜೊತೆಗೆ ಸೇರಿಸಿದ್ದಲ್ಲದೆ, ಆ ನಷ್ಟದಲ್ಲಿರುವ ಬ್ಯಾಂಕುಗಳ ಹೆಸರುಗಳನ್ನು ಉಳಿಸಿಕೊಳ್ಳಲಾಯಿತು. ಗುಜರಾತಿ ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿ ನಷ್ಟದಲ್ಲಿರುವ ಉತ್ತರ ಭಾರತದ ಬ್ಯಾಂಕುಗಳನ್ನು, ಕರಾವಳಿಯ ಬ್ಯಾಂಕುಗಳನ್ನು ಬಲಿಕೊಟ್ಟು ಉಳಿಸಿಕೊಳ್ಳಲಾಯಿತು. ಅದಕ್ಕೆ ಪ್ರತಿಫಲವಾಗಿ ಕರ್ನಾಟಕಕ್ಕೆ ಸಿಕ್ಕಿರುವುದಾದರೂ ಏನು? ಇಂದು ಕರ್ನಾಟಕದ ಗ್ರಾಹಕರು ಈ ಬ್ಯಾಂಕುಗಳಿಗೆ ತೆರಳಿ, ಅಲ್ಲಿರುವ ಹಿಂದಿ ಭಾಷಿಗರ ಜೊತೆಗೆ ಹೆಣಗಾಡಬೇಕಾಗಿದೆ. ಕನ್ನಡದಲ್ಲಿ ಮಾತನಾಡಿದರೆ, ‘‘ಹಿಂದಿ ಕಲಿತು ಬನ್ನಿ’’ ಎನ್ನುವ ಉದ್ಧಟತನದ ಮಾತುಗಳನ್ನು ನಾವು ಕೇಳ ಬೇಕಾಗಿದೆ. ಬ್ಯಾಂಕುಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವುದರ ಜೊತೆಗೆ, ಕರ್ನಾಟಕದ ಪಾಲಿಗೆ ಸಂಪೂರ್ಣ ಪರಕೀಯವಾಗಿ ಬಿಟ್ಟಿವೆ. ಬ್ಯಾಂಕುಗಳ ಕತೆ ಮುಗಿದಿ ಬಳಿಕ ಈಗ, ವಿವಿಧ ರಾಜ್ಯಗಳಲ್ಲಿ ಸ್ಥಳೀಯರು ಕಟ್ಟಿದ ಸಹಕಾರಿ ಸಂಘಗಳ ಮೇಲೆ ಕೇಂದ್ರದ ಕಣ್ಣು ಬಿದ್ದಿದೆ. ಇವುಗಳನ್ನು ವಿಲೀನಗೊಳಿಸುವ ಯೋಜನೆಯೊಂದನ್ನು ಕೇಂದ್ರದಲ್ಲಿ ಕುಳಿತು ಸಚಿವ ಅಮಿತ್ ಶಾ ರೂಪಿಸುತ್ತಿದ್ದಾರೆ. ಈ ವಿಲೀನದ ಅಂತಿಮ ಉದ್ದೇಶವೆಂದರೆ, ದಕ್ಷಿಣ ಭಾರತದಲ್ಲಿ ಲಾಭದಾಯಕವಾಗಿ ನಡೆಯುತ್ತಿರುವ ಸಹಕಾರಿ ಸಂಸ್ಥೆಗಳನ್ನು ಉತ್ತರ ಭಾರತದ ಸಂಸ್ಥೆಗಳ ಜೊತೆಗೆ ವಿಲೀನಗೊಳಿಸಿ ಅವುಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿಕೊಳ್ಳುವುದು. ಅದರ ಮೊದಲನೆಯ ಹಂತವಾಗಿ ಕರ್ನಾಟಕದ ಮೊಸರಿಗೆ ಹಿಂದಿಯ ದಹಿಯನ್ನು ಹಿಂಡುವ ಪ್ರಯತ್ನವೊಂದನ್ನು ಮಾಡಿ ಸಿಕ್ಕಿ ಹಾಕಿಕೊಂಡಿದೆ.

ಆಹಾರ ಸುರಕ್ಷತಾ ಪ್ರಾಧಿಕಾರವು ಇತ್ತೀಚೆಗೆ ‘‘ಮುಂದಿನ ದಿನಗಳಲ್ಲಿ ಇತರೆಲ್ಲ ಭಾಷೆಗಳಲ್ಲಿರುವ ಮೊಸರನ್ನೂ ‘ದಹಿ’ಯೆಂದೇ ನಮೂದಿಸಬೇಕು’’ ಎಂಬ ನಿರ್ದೇಶನವನ್ನು ಮಾಡಿತ್ತು. ಅದರ ನಿರ್ದೇಶನದ ಪ್ರಕಾರ ನಂದಿನಿಯು ತನ್ನ ಮೊಸರನ್ನು ‘ದಹಿ’ಯಾಗಿಸಿತು. ತಮಿಳಿನಲ್ಲಿರುವ ‘ತಯಿರ್’ ಕೂಡ ದಹಿಯಾಗಿ ಮತಾಂತರಗೊಂಡಿತು. ಕೇಂದ್ರ ಸರಕಾರದ ಪ್ರಕಾರ ಇದೊಂದು ಸಣ್ಣ ವಿಷಯ. ಬದಲಾಗಿರುವುದು ಹೆಸರು ಮಾತ್ರ, ಮೊಸರಲ್ಲ ಎನ್ನುವುದು ಕೇಂದ್ರದ ಸಮಜಾಯಿಷಿ. ಈ ಹೆಸರು ಬದಲಾವಣೆಯನ್ನು ಪ್ರಶ್ನಿಸುವುದು ‘ಮೊಸರಲ್ಲಿ ಕಲ್ಲು ಹುಡುಕಿದಂತೆ’ ಎಂದೂ ತನ್ನ ಹಿಂಬಾಲಕರ ಮೂಲಕ ಪ್ರತಿಪಾದಿಸಿತು. ಆದರೆ ತಮಿಳುನಾಡು ಮಾತ್ರ, ‘‘ಮೊಸರಿನಲ್ಲಿ ದಹಿಯೆನ್ನುವ ಕಲ್ಲನ್ನು ಹಾಕಿದ್ದಾದರೂ ಯಾಕೆ?’’ ಎಂದು ಕೇಂದ್ರವನ್ನು ಆಕ್ಷೇಪಿಸಿತು. ಕರ್ನಾಟಕದ ‘ನಂದಿನಿ’ಯ ಉತ್ಪನ್ನಗಳಿಗೆ ವಿವಿಧ ರಾಜ್ಯಗಳಲ್ಲಿ ಬೇಡಿಕೆಗಳಿವೆ. ಮೊಸರು ಕರ್ನಾಟಕದಲ್ಲಿ ಮೊಸರು ನಾಮಾಂಕಿತದಲ್ಲೇ ಮಾರಾಟವಾದರೆ, ತಮಿಳುನಾಡಿನಲ್ಲಿ ತಯಿರ್ ಆಗಿ ಮಾರಾಟವಾಗುತ್ತದೆ. ಆಯಾ ರಾಜ್ಯಗಳ ಜನರ ಭಾಷೆಯಲ್ಲೇ ಮೊಸರನ್ನು ನಂದಿನಿ ಮಾರುತ್ತಾ ಬಂದಿದೆ. ಹೀಗಿರುವಾಗ ಏಕಾಏಕಿ ‘‘ಎಲ್ಲರೂ ಮೊಸರನ್ನು ದಹಿ ಎಂದು ಕರೆಯಬೇಕು’’ ಎನ್ನುವ ಆದೇಶವನ್ನು ಹೊರಡಿಸಿರುವುದರ ಹಿಂದಿರುವ ಹಿತಾಸಕ್ತಿ ಯಾವುದು? ನಂದಿನಿಯ ಆಹಾರೋತ್ಪನ್ನಗಳಿಗೆ ಈ ಮೊಸರಿನ ಭಾಷಾಂತರ ಯಾವ ರೀತಿಯಲ್ಲಿ ಲಾಭವಾಗುತ್ತದೆ? ತಯಿರನ್ನು ದಹಿ ಮಾಡಿ ಕೊಟ್ಟರೆ ಜನರು ಹೆಚ್ಚು ಕೊಂಡುಕೊಳ್ಳುತ್ತಾರೆಯೆ? ಹಾಗೆ ಕೊಂಡು ಕೊಳ್ಳುವುದಾಗಿದ್ದರೆ ತಮಿಳುನಾಡಿನಲ್ಲಿ ಯಾಕೆ ದಹಿಯನ್ನು ವಿರೋಧಿಸಿದರು? ಜನರಿಗೆ ಅಪರಿಚಿತವಾಗಿರುವ ಭಾಷೆಯಲ್ಲಿ ಉತ್ಪನ್ನವನ್ನು ಮುದ್ರಿಸಿ ಮಾರಾಟ ಮಾಡುವುದು ‘ವ್ಯಾವಹಾರಿಕವಾಗಿ ಹೇಗೆ ಲಾಭ?’ ಜನರ ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಮೌನವನ್ನೇ ಉತ್ತರವಾಗಿ ನೀಡಿದೆ.

ಅಮುಲ್ ಗುಜರಾತ್ ರಾಜ್ಯಕ್ಕೆ ಸೇರಿರುವುದರಿಂದ, ‘ಮೊಸರಿಗೆ’ ಅವರು ಇಷ್ಟವಿರುವ ಹೆಸರನ್ನೇ ಇಟ್ಟು ಮಾರಲಿ. ನಂದಿನಿ ಉತ್ಪಾದಿಸುತ್ತಿರುವ ಉತ್ಪನ್ನಗಳ ಹೆಸರು ಬದಲಿಸಲೇ ಬೇಕು ಎಂದಾದರೆ, ಇತರ ರಾಜ್ಯಗಳಲ್ಲಿ ಹಿಂದಿಯ ಹೆಸರಿನ ಬದಲಿಗೆ ಕನ್ನಡದ ಹೆಸರನ್ನೇ ಇಡಲಿ. ನಂದಿನಿಯ ಮೂಲಕ ಕನ್ನಡದ ಹಾಲು, ಮೊಸರು, ಬೆಣ್ಣೆ, ತುಪ್ಪ ಮೊದಲಾದ ಪದಗಳೂ ಉತ್ತರ ಭಾರತವನ್ನು ತಲುಪಲಿ. ವಿಪರ್ಯಾಸವೆಂದರೆ ಕರ್ನಾಟಕದ ನಂದಿನಿಯ ಉತ್ಪನ್ನಗಳನ್ನು ಕರ್ನಾಟಕದಲ್ಲೇ ಕನ್ನಡದಲ್ಲಿ ಕರೆಯುವ ಹಕ್ಕುಗಳನ್ನು ಕೇಂದ್ರ ಸರಕಾರ ಕಿತ್ತುಕೊಳ್ಳಲು ಮುಂದಾಯಿತು. ಕರ್ನಾಟಕದ ಹೆಮ್ಮೆಯಾಗಿರುವ ನಂದಿನಿ ತನ್ನ ಗರ್ಭದಲ್ಲಿಟ್ಟು ಹುಟ್ಟಿಸಿದ ಮಗುವಿಗೆ ದಾರಿಯಲ್ಲಿ ಹೋಗುವ ಹಿಂದಿ ಭಾಷಿಗರಿಗೆ ನಾಮಕರಣ ಮಾಡಲು ಅಧಿಕಾರ ಕೊಟ್ಟವರು ಯಾರು? ಈ ಪ್ರಶ್ನೆಯನ್ನು ತಮಿಳುನಾಡಿನ ಜನರು ಜೋರು ಧ್ವನಿಯಲ್ಲಿ ಕೇಳತೊಡಗಿದ್ದೇ, ಸರಕಾರ ತನ್ನ ಆದೇಶವನ್ನು ಹಿಂದೆಗೆದಿದೆ. ಕರ್ನಾಟಕದಲ್ಲೂ ದಹಿಯ ವಿರುದ್ಧ ಮೊಸರು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿತು. ರಾಜಕೀಯ ಪಕ್ಷಗಳ ಮುಖಂಡರು, ಕನ್ನಡ ಹೋರಾಟಗಾರರೂ ದಹಿಯ ವಿರುದ್ಧ ಧ್ವನಿಯೆತ್ತಿದರು. ಕೊನೆಗೂ ಕನ್ನಡದ ಮೊಸರಿಗೆ ಕಲ್ಲು ಹಾಕುವ ತನ್ನ ಕುಚೋದ್ಯದಿಂದ ಕೇಂದ್ರ ಸರಕಾರ ಹಿಂದೆ ಸರಿದಿದೆ.

ಒಂದನ್ನು ಗಮನಿಸಬೇಕಾಗಿದೆ. ಮೊಸರನ್ನು ‘ದಹಿ’ ಮಾಡಲು ಹೊರಟಾಗ ಹೊರ ಬಿದ್ದ ಆಕ್ರೋಶ, ‘ನಂದಿನಿ’ಯನ್ನು ‘ಅಮುಲ್’ ಮಾಡುತ್ತಿರುವುದರ ವಿರುದ್ಧ ಕೇಳುತ್ತಿಲ್ಲ. ದಹಿ ವಿರುದ್ಧ ತಮಿಳರು ಜೋರು ಧ್ವನಿಯಲ್ಲಿ ಮಾತನಾಡಿದ ಬಳಿಕವಷ್ಟೇ ಕನ್ನಡಿಗರು ಮಾತನಾಡತೊಡಗಿದರು. ನಂದಿನಿಯನ್ನು ಅಮುಲ್ ಜೊತೆಗೆ ವಿಲೀನ ಮಾಡಿದರೆ ಅದರ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ತಮಿಳರಂತೂ ಬರುವುದಿಲ್ಲ. ನಂದಿನಿ ಕನ್ನಡದ ಆಸ್ತಿ. ಇಲ್ಲಿನ ರೈತರು ಸಂಘಟಿತರಾಗಿ ಕಟ್ಟಿ ನಿಲ್ಲಿಸಿದ ಸಂಸ್ಥೆ ನಂದಿನಿ. ಈ ನಾಡಿನ ಸಹಸ್ರಾರು ರೈತರನ್ನು ನಂದಿನಿ ಪೊರೆದಿದೆ. ಆದರೆ ಕೇಂದ್ರ ಸರಕಾರ, ಗುಜರಾತ್‌ನ ಅಮುಲ್‌ನ್ನು ದಷ್ಟಪುಷ್ಟಗೊಳಿಸುವುದಕ್ಕಾಗಿ ನಂದಿನಿಯನ್ನು ವಿಲೀನಗೊಳಿಸುವ ಪ್ರಯತ್ನ ನಡೆಸುತ್ತಿದೆ. ದೇಶಾದ್ಯಂತ ಹಾಲಿಗೆ ದೂಧ್ ಎಂದೂ ಮೊಸರಿಗೆ ದಹಿಯೆಂದು ಕರೆಯುವ ಅಗತ್ಯವಿರುವುದು ಅಮುಲ್ ಕಂಪೆನಿಗೆ. ದೇಶದ ಎಲ್ಲ ಸಹಕಾರಿ ಸಂಸ್ಥೆಗಳ ಉತ್ಪನ್ನಗಳು ಅಮುಲ್ ಪಾಲಾದಾಗ, ಅವುಗಳನ್ನು ಒಂದೇ ಹೆಸರಿನಿಂದ ಕರೆಯುವ ಮೂಲಕ ಅದರ ಮಾರುಕಟ್ಟೆಗೆ ಅನುಕೂಲವಾಗುತ್ತದೆ. ಮೊಸರು ದಹಿಯಾಗುವುದೆಂದರೆ, ಆರಂಭದಲ್ಲಿ ಕರ್ನಾಟಕದ ಬ್ಯಾಂಕುಗಳಿಗೆ ಹಿಂದಿ ಭಾಷಿಕ ಸಿಬ್ಬಂದಿಯನ್ನು ತುರುಕಿಸಿದಂತೆ. ನಂದಿನಿ ಅಮುಲ್ ಆಗುವುದೆಂದರೆ, ಕರ್ನಾಟಕದ ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕುಗಳಲ್ಲಿ ವಿಲೀನವಾಗಿ ಇಲ್ಲವಾದಂತೆ. ಕರ್ನಾಟಕದ ಬ್ಯಾಂಕುಗಳಿಗೆ ಒದಗಿದ ದುರ್ಗತಿ ಇಲ್ಲಿನ ಇತರ ಸಹಕಾರಿ ಸಂಘಟನೆಗಳಿಗೆ ಒದಗಬಾರದು. ನಂದಿನಿಯನ್ನು ಅಮುಲ್ ಜೊತೆಗೆ ಸೇರಿಸಿ ಅದನ್ನು ಇಲ್ಲವಾಗಿಸಿ, ಕರ್ನಾಟದ ಗುರುತುಗಳನ್ನು ಹಂತಹಂತವಾಗಿ ಅಳಿಸಿ ಹಾಕುವ ಸಂಚುಗಳ ವಿರುದ್ಧ ಜನತೆ ಜಾಗೃತರಾಗುವ ಸಮಯ ಬಂದಿದೆ. ಮೊಸರನ್ನು ದಹಿಯಾಗಿಸಿದಾಗ ವ್ಯಕ್ತವಾದ ಆಕ್ರೋಶಕ್ಕಿಂತ ನೂರು ಪಟ್ಟು ಆಕ್ರೋಶವನ್ನು ನಂದಿನಿಯನ್ನು ಅಮುಲ್ ಆಗಿ ಬದಲಾಯಿಸುವುದರ ವಿರುದ್ಧ ವ್ಯಕ್ತಪಡಿಸಬೇಕಾಗಿದೆ.

Similar News