ವಿಶ್ವ ಬಂಟ ಪ್ರತಿಷ್ಠಾನದಿಂದ ಬಡ್ಡಿ ರಹಿತ ಶಿಕ್ಷಣ ಸಾಲ ವಿತರಣೆ

Update: 2023-04-01 12:47 GMT

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಶ್ರೇಷ್ಠ ಕಾರ್ಯ ವಾಗಿದೆ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದ್ಬಳಕೆ ಮಾಡುವ ಮೂಲಕ ಬದುಕಿನಲ್ಲಿ ಯಶಸ್ಸು ಸಾಧಿಸಬೇಕೆಂದು ವಿಶ್ವ ಬಂಟ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಹೇಳಿದರು.

ವಿಶ್ವ ಬಂಟ ಪ್ರತಿಷ್ಠಾನದ ವತಿಯಿಂದ ನಗರದ ಹೋಟೆಲ್ ಮೋತಿಮಹಲ್‌ನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶಿಕ್ಷಣ ಸಾಲ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣಕ್ಕೆ ನೆರವು, ವೈದ್ಯಕೀಯ ನೆರವು, ಬಡವರಿಗೆ ಮನೆ ನಿರ್ಮಾಣ ಸಹಿತ ಹಲವು ಸಮಾಜಮುಖಿ ಕಾರ್ಯ ಗಳಲ್ಲಿ ವಿಶ್ವ ಬಂಟ ಪ್ರತಿಷ್ಠಾನ ತನ್ನನ್ನು ತೊಡಗಿಸಿಕೊಂಡಿದೆ. ಕಳೆದ 27 ವರ್ಷಗಳಲ್ಲಿ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಗಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್, ಕಾನೂನು, ಡೆಂಟಲ್ ಸೈನ್ಸ್, ಅಗ್ರಿಕಲ್ಚರಲ್ ಸೈನ್ಸ್ ಸಹಿತ ವಿವಿಧ ಕೋರ್ಸ್‌ಗಳ 143 ವಿದ್ಯಾರ್ಥಿಗಳಿಗೆ 34.06 ಲಕ್ಷ ರೂ. ಸ್ಕಾಲರ್‌ಶಿಪ್ ಹಾಗೂ ಬಡ್ಡಿ ರಹಿತ ಶಿಕ್ಷಣ ಸಾಲ ವಿತರಿಸಲಾಯಿತು. ಪ್ರತಿಷ್ಠಾನದ ಪೋಷಕ ಡಾ.ಬಿ.ಆರ್.ಶೆಟ್ಟಿ, ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ , ಖಜಾಂಚಿ ಸಿಎ ಸುದೇಶ್‌ಕುಮಾರ್ ರೈ, ಮಾಜಿ ಅಧ್ಯಕ್ಷ ಡಾ.ಶಾಂತಾರಾಮ್ ಶೆಟ್ಟಿ, ಯೋಜನಾ ನಿರ್ದೇಶಕ ಡಾ.ಬಿ.ಸಂಜೀವ ರೈ, ಉಪಾಧ್ಯಕ್ಷ ಕೆ.ಸಚ್ಚಿದಾನಂದ ಹೆಗ್ಡೆ ಉಪಸ್ಥಿತರಿದ್ದರು.

Similar News