ಆಲೆಟ್ಟಿ ಗ್ರಾಮದಲ್ಲಿ ನಿರ್ಮಾಣವಾಗದ ಸೇತುವೆ: ಚುನಾವಣಾ ಬಹಿಷ್ಕಾರಕ್ಕೆ ನಾಗರಿಕರ ನಿರ್ಧಾರ

ಬ್ಯಾನರ್ ಅಳವಡಿಕೆ

Update: 2023-04-01 16:52 GMT

ಸುಳ್ಯ: ಆಲೆಟ್ಟಿ ಗ್ರಾಮದ ಶೇಖಪಟ್ಟಿ ಎಂಬಲ್ಲಿ ಕಳೆದ ಸುಮಾರು 45 ವರ್ಷಗಳಿಂದ ಸೇತುವೆ ನಿರ್ಮಿಸಿ ಸಂಪರ್ಕ ಕಲ್ಪಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಬೇಡಿಕೆ ಇಡಲಾಗಿದ್ದು, ಇಲ್ಲಿಯ ತನಕ ಬೇಡಿಕೆ ಈಡೇರಿಸಲಿಲ್ಲ ಎಂಬ ಕಾರಣಕ್ಕಾಗಿ ಈ ಭಾಗದ ನಾಗರಿಕರು ಈ ಬಾರಿಯ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದು, ಮತದಾನ ಬಹಿಷ್ಕಾರ ಬ್ಯಾನರ್‌ ಅಳವಡಿಸಿದ್ದಾರೆ.

ನಾರ್ಕೋಡಿನಿಂದ ಕುಂಚಡ್ಕ ರಸ್ತೆಯ ಮೂಲಕ ಬಾಳೆಬಲ್ಪು ಸಂಪರ್ಕದ ರಸ್ತೆ ಇದಾಗಿದ್ದು ಶೇಖಪಟ್ಟಿ ಎಂಬಲ್ಲಿರುವ ಹೊಳೆಗೆ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆಯನ್ನು ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಚುನಾವಣೆಯ ಸಂದರ್ಭ ಮತಯಾಚಿಸಲು ಬಂದು ಭರವಸೆ ನೀಡಿ ಹೋಗುತ್ತಾರೆ. ಕಳೆದ ಬಾರಿ ಶಾಸಕರು ಈ ಭಾಗಕ್ಕೆ ಬೇರೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ 75 ಲಕ್ಷ ರೂ. ಅನುದಾನ ಒದಗಿಸಿಕೊಡುವುದಾಗಿ ಹೇಳಿದ್ದಾರೆ. ಆದರೆ ಇಲ್ಲಿಯವರೆಗೆ ಆಶ್ವಾಸನೆಯಾಗಿಯೇ ಉಳಿದಿದೆ. ಈ ಭಾಗದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಮನೆಗಳಿದ್ದು ಪರಿಶಿಷ್ಟ ಪಂಗಡದವರು ಹೆಚ್ಚಾಗಿದ್ದಾರೆ. ದಿನ ನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಕಚೇರಿ ಇನ್ನಿತರ ಕೆಲಸಕ್ಕೆ ಹೋಗುವ ಸಾರ್ವಜನಿಕರು ಸುತ್ತು ಬಳಸಿ ನಡೆದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ನದಿಯ ನೀರಿನ ಹರಿವು ಹೆಚ್ಚಾಗಿರುವುದರಿಂದ ದಾಟಲು ಸಾಧ್ಯವಿಲ್ಲದೆ ಪಾಲದ ಮೂಲಕ ದಾಟಿ ಕಾಲ್ನಡಿಗೆಯಲ್ಲಿ ಹೋಗಬೇಕಾದ ಸ್ಥಿತಿ ಇದೆ. ನಮ್ಮ ಅಹವಾಲನ್ನು ಇಷ್ಟು ವರ್ಷಗಳಿಂದ ಪ್ರತಿ ಬಾರಿ ಹೇಳಿದರೂ ಈಡೇರಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಅದಕ್ಕಾಗಿ ಈ ಬಾರಿ ಚುನಾವಣಾ ಬಹಿಷ್ಕಾರದ ತೀರ್ಮಾನಕ್ಕೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಭರವಸೆ ನೀಡಿದರೆ ಸಾಲದು ಅನುದಾನ ಬಿಡುಗಡೆಯಾಗಿ ಶಂಕು ಸ್ಥಾಪನೆ ನೆರವೇರಿಸಿದರೆ ಮಾತ್ರ ಬಹಿಷ್ಕಾರದಿಂದ ಹಿಂದೆ ಸರಿಯುತ್ತೇವೆ ಎಂದು ನೊಂದ ಈ ಭಾಗದ ನಾಗರಿಕರು ತಿಳಿಸಿದ್ದಾರೆ.

Similar News