ಮಂಗಳೂರು: ಕ್ರೈಸ್ತರಿಂದ ‘ಗರಿಗಳ ರವಿವಾರ’ ಆಚರಣೆ

Update: 2023-04-02 13:32 GMT

ಮಂಗಳೂರು: ನಗರದ ಕ್ರೈಸ್ತ ಧರ್ಮ ಪ್ರಾಂತದ ಎಲ್ಲಾ ಚರ್ಚ್‌ಗಳಲ್ಲಿ ರವಿವಾರ ಕ್ರೈಸ್ತ ಬಾಂಧವರು ‘ಗರಿಗಳ ರವಿವಾರ’ವನ್ನು ಆಚರಿಸಿ ಸಂಭ್ರಮಿಸಿದರು. ಬೆಳಗ್ಗಿನ ಪೂಜೆಗೆ ಮುಂಚಿತವಾಗಿ ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ಪವಿತ್ರಗೊಳಿಸಲಾಯಿತು. ಬಳಿಕ ಭಕ್ತರು ಗರಿಗಳನ್ನು  ಹಿಡಿದು ಮೆರವಣಿಗೆಯಲ್ಲಿ ಸಾಗಿ ಯೇಸು ಕ್ರಿಸ್ತರಿಗೆ ಜೈಕಾರ ಕೂಗಿದರು. ನಂತರ ಚರ್ಚ್‌ಗಳಲ್ಲಿ ಬಲಿಪೂಜೆ, ಬೈಬಲ್ ವಾಚನ, ಧರ್ಮಗುರುಗಳಿಂದ ಪ್ರವಚನ ನಡೆಯಿತು.

ನಗರದ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬಿಷಪ್ ಅತಿ ವಂ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಮತ್ತಿತರ ಚರ್ಚ್‌ಗಳಲ್ಲಿ ಆಯಾ ಧರ್ಮಗುರುಗಳ ನೇತೃತ್ವದಲ್ಲಿ ಬಲಿ ಪೂಜೆಗಳು ನೆರವೇರಿದವು.

ನಗರದ ಮಿಲಾಗ್ರಿಸ್, ಬೆಂದೂರು, ಬಿಜೈ, ಉರ್ವ, ಅಶೋಕನಗರ, ತೋಕೂರು, ಕಾಸ್ಸಿಯಾ, ವೆಲೆನ್ಸಿಯಾ, ಆಂಜೆಲೋರ್, ಕುಲಶೇಖರ, ಪಾಲ್ದನೆ, ಶಕ್ತಿನಗರ, ಕೂಳೂರು, ಬೋಂದೆಲ್, ಬಜಾಲ್, ವಾಮಂಜೂರು ಮತ್ತಿತರ ಚರ್ಚ್‌ಗಳಲ್ಲಿ ಗರಿಗಳ ರವಿವಾರದ ಸಂಭ್ರಮ ಕಂಡು ಬಂದವು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದ ಸಂದರ್ಭದಲ್ಲಿ ಅಲ್ಲಿನ ಜನರು ವೈಭವಯುತವಾಗಿ ಸ್ವಾಗತ ಕೋರಿದ ಹಾಗೂ ಅಂದಿನಿಂದ ಮರಣದ ತನಕ ಅವರು ಅನುಭವಿಸಿದ ಕಷ್ಟ ಸಂಕಷ್ಟಗಳ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

‘ಗರಿಗಳ ರವಿವಾರ’ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ (ಹೋಲಿವೀಕ್) ಆರಂಭಗೊಂಡಿದೆ. ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ರವಿವಾರ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬವನ್ನು ಆಚರಿಸಲಾಗುತ್ತದೆ.

Similar News