ಕೊಣಾಜೆ: ಅಕ್ರಮ ಮದ್ಯ ಸಾಗಾಟ; ಕಾರು ಸಹಿತ ಇಬ್ಬರ ಬಂಧನ
ಕೊಣಾಜೆ: ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ನಡೆಸುತ್ತಿದ್ದ ಕಾರನ್ನು ತಡೆದ ಕೊಣಾಜೆ ಪೊಲೀಸರು, ಕಾರು ಹಾಗೂ 66,806 ರೂ. ಬೆಲೆಯ ಮದ್ಯವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಉಪ್ಪಳ ಮೂಲದ ಪುರುಷೋತ್ತಮ್ ಮತ್ತು ಅವಿನಾಶ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಣಾಜೆ ಠಾಣೆ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನಂದರಪಡ್ಪು ಚೆಕ್ ಪೋಸ್ಟ್ ನಲ್ಲಿ ಗಸ್ತು ನಿರತ ಪೊಲೀಸರು, ಸಂಶಯದ ಮೇರೆಗೆ ಕಾರಿನಲ್ಲಿದ್ದವರನ್ನು ಪ್ರಶ್ನಿಸಿದಾಗ ಹೆಸರು, ವಿಳಾಸ ಹೇಳಲು ತಡವರಿಸಿದ್ದಾರೆ. ಇದರಿಂದ ಸಂಶಯಗೊಂಡು ಕಾರಿನ ಹಿಂಬದಿ ಸೀಟನ್ನು ಪರಿಶೀಲಿಸಿದಾಗ ಪರವಾನಿಗೆ ಇಲ್ಲದ 20 ರಟ್ಟಿನ ಬಾಕ್ಸಿನಲ್ಲಿದ್ದ 66,806 ರೂ. ಬೆಲೆಯ ಮದ್ಯ ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ತೊಕ್ಕೊಟ್ಟುವಿನ ಹೈಸ್ಪಿರಿಟ್ ಅಂಗಡಿಯಿಂದ ತೆಗೆದುಕೊಂಡು ಮಾರಾಟಕ್ಕಾಗಿ ಕೇರಳದ ಉಪ್ಪಳದ ಕಡೆಗೆ ಹೋಗುವುದಾಗಿ ತಿಳಿಸಿದ್ದರು. ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.