ಚೀನಾ-ಭಾರತ ಸಂಬಂಧ: ಅರುಣೋದಯವಾಗಲಿ

Update: 2023-04-06 04:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದೆ. 11 ಹೆಸರುಗಳ ಪಟ್ಟಿಯನ್ನು ನಕಾಶೆಯೊಂದಿಗೆ ಅದು ಬಿಡುಗಡೆಗೊಳಿಸಿದ್ದು, ಈ ನಕಾಶೆಯಲ್ಲಿ ಅರುಣಾಚಲವನ್ನು ‘ಝಂಗ್ನಾನ್’ ಎಂದು ಹೆಸರಿಸಿರುವ ಚೀನಾ, ಅದನ್ನು ಟಿಬೆಟ್‌ನ ದಕ್ಷಿಣ ಭಾಗ ಎಂದು ಕರೆದಿದೆ. ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಸಮೀಪದ ಪಟ್ಟಣವೊಂದನ್ನೂ ಅದು ಈ ಪಟ್ಟಿಯಲ್ಲಿ ಸೇರಿಸಿದೆ. ಇಂತಹ ಮರುನಾಮಕರಣ ಹೊಸತೇನೂ ಅಲ್ಲ. ಇದು ಚೀನಾದ ಮೂರನೇ ಪ್ರಯತ್ನವಾಗಿದೆ. 2017ರಲ್ಲಿ ಆರು ಸ್ಥಳಗಳಿಗೆ, 2021ರಲ್ಲಿ 15 ಸ್ಥಳಗಳಿಗೆ ಮತ್ತು ಇದೀಗ 11 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದೆ. ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸುವ ಅದರ ಬೇರೆ ಬೇರೆ ಪ್ರಯತ್ನಗಳ ಒಂದು ಭಾಗ ಇದು. ಪ್ರಶ್ನೆಯಿರುವುದು ಚೀನಾದ ತಕರಾರಿನ ಕುರಿತಂತೆ ಅಲ್ಲ, ಭಾರತದ ವೌನದ ಕುರಿತಂತೆ. ಇತ್ತೀಚೆಗೆ ಮಹಾರಾಷ್ಟ್ರವು ಬೆಳಗಾವಿಯ ಗಡಿಭಾಗದ ಜನರಿಗೆ ಆರೋಗ್ಯ ವಿಮೆಯನ್ನು ಘೋಷಿಸಿದಾಗ ಅದನ್ನು ಕರ್ನಾಟಕ ಬಲವಾಗಿ ವಿರೋಧಿಸಿತ್ತು. ಮಹಾರಾಷ್ಟ್ರ ಭಾರತದ ಭಾಗವೇ ಆಗಿದ್ದರೂ, ಬೆಳಗಾವಿ ಕನ್ನಡಿಗರ ಮೇಲೆ ಹೊರ ರಾಜ್ಯವೊಂದು ಹಕ್ಕು ಸ್ಥಾಪಿಸಲು ಮುಂದಾಗುವುದನ್ನು ಸಹಿಸಿಕೊಳ್ಳಲು ಕರ್ನಾಟಕ ಸಿದ್ಧವಿರಲಿಲ್ಲ. ಕೇಂದ್ರಕ್ಕೆ ಇದರ ವಿರುದ್ಧ ದೂರು ಸಲ್ಲಿಸಿದೆ ಮಾತ್ರವಲ್ಲ, ಮಹಾರಾಷ್ಟ್ರ ತನ್ನ ವರ್ತನೆಯನ್ನು ಮುಂದುವರಿಸಿದರೆ ಅಷ್ಟೇ ತೀವ್ರವಾದ ಪ್ರತಿರೋಧನ್ನು ನೀಡಬೇಕಾಗುತ್ತದೆ ಎಂದು ಕರ್ನಾಟಕ ಹೇಳಿಕೆ ನೀಡಿದೆ. ಭಾರತದೊಳಗಿನ ಎರಡು ರಾಜ್ಯಗಳು ಗಡಿಯನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿರುವಾಗ, ಚೀನಾವು ಭಾರತದ ಭಾಗವಾಗಿರುವ ಸ್ಥಳಗಳಿಗೆ ಮರುನಾಮಕರಣ ಮಾಡಿ ತನ್ನದೆಂದು ಘೋಷಿಸಿಕೊಳ್ಳುತ್ತಿರುವಾಗ ಭಾರತ ಸರಕಾರ ಯಾಕೆ ವೌನವಾಗಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಶತ್ರು ರಾಷ್ಟ್ರಗಳು ಕಾಲು ಕೆರೆದಾಗಲೆಲ್ಲ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿದೆ. ಈ ಹಿಂದೆ ಪಾಕಿಸ್ತಾನ ಪದೇ ಪದೇ ಗಡಿಯಲ್ಲಿ ಉಗ್ರರನ್ನು ಬಳಸಿಕೊಂಡು ದಾಳಿ ನಡೆಸಿದಾಗ ‘ಸರ್ಜಿಕಲ್ ಸ್ಟ್ರೈಕ್’ ಮೂಲಕ ಪ್ರತ್ಯುತ್ತರಿಸಿತ್ತು. ಎರಡೆರಡು ಬಾರಿ ಈ ದಾಳಿ ನಡೆಸಿ, ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರಿಸಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿತ್ತು. ಸೇನೆಯ ಮುಖ್ಯಸ್ಥರೂ ಪಾಕಿಸ್ತಾನದ ವಿರುದ್ಧ ಆಗಾಗ ಆಕ್ರೋಶ ಭರಿತ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಭಾರತದ ಈ ಉಗ್ರ ಪ್ರತ್ಯುತ್ತರದಿಂದಾಗಿಯೇ ಪಾಕಿಸ್ತಾನ ಬಾಯಿ ಮುಚ್ಚಿ ಕೂತಿದೆ. ಇಲ್ಲವಾದರೆ ಅದು ಕಾಶ್ಮೀರವನ್ನು ಬಳಸಿಕೊಂಡು ಇನ್ನಷ್ಟು ಅನಾಹುತಗಳನ್ನು ಮಾಡುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪಾಕಿಸ್ತಾನ ಇಂದು ಚೀನಾವನ್ನು ಬಳಸಿಕೊಂಡು ಭಾರತದ ವಿರುದ್ಧ ತನ್ನ ಕಾರ್ಯಾಚರಣೆಯನ್ನು ನಡೆಸಲು ಮುಂದಾಗಿದೆ. ಅವೆರಡೂ ದೇಶಗಳು ಪರಸ್ಪರ ಕೈ ಮಿಲಾಯಿಸಿಕೊಂಡಿವೆ. ತನ್ನ ಕೈಯಲ್ಲಿರುವ ಆಕ್ರಮಿತ ಕಾಶ್ಮೀರ ಪ್ರದೇಶದ ಅಪಾರ ಭೂಭಾಗವನ್ನು ಪಾಕಿಸ್ತಾನ ಚೀನಾಕ್ಕೆ ಬಿಟ್ಟುಕೊಟ್ಟಿದೆ. ಇದು ಭಾರತಕ್ಕೆ ತೀವ್ರ ಇರಿಸುಮುರಿಸು ಸೃಷ್ಟಿಸಿದೆ. ಗಲ್ವಾನ್ ಸಂಘರ್ಷದ ಬಳಿಕ ಭಾರತದ ಭೂಪ್ರದೇಶದಿಂದ ಚೀನಾ ಸಂಪೂರ್ಣ ಹಿಂದೆ ಸರಿದಿಲ್ಲ ಎನ್ನುವ ಆರೋಪಗಳಿಗೂ ಸರಕಾರ ಸ್ಪಷ್ಟೀಕರಣವನ್ನು ನೀಡಿಲ್ಲ. ಇತ್ತೀಚೆಗಷ್ಟೇ ಸಂಸತ್ತಿನಲ್ಲಿ, ಚೀನಾ ಕೈವಶವಾಗಿರುವ ಭಾರತದ ಗಸ್ತು ಪ್ರದೇಶಗಳು ಚರ್ಚೆಯಾಗಿದ್ದವು. ಭಾರತದ ಅರ್ಧದಷ್ಟು ಗಸ್ತು ಕೇಂದ್ರಗಳನ್ನು ಚೀನಾ ವಶ ಪಡಿಸಿಕೊಂಡಿದೆ ಎನ್ನುವ ಆರೋಪಗಳಿಗೂ ಸರಕಾರ ಯಾವುದೇ ಉತ್ತರವನ್ನು ನೀಡಲಿಲ್ಲ. ಇಲ್ಲಿ ಚೀನಾ ಆಕ್ರಮಣಕ್ಕಿಂತಲೂ ಆತಂಕಕಾರಿಯಾದುದು ಸರಕಾರದ ವೌನ. ಚೀನಾದ ವಿಷಯದಲ್ಲಿ ಸರಕಾರ ಯಾಕೆ ಮೃದು ಧೋರಣೆಯನ್ನು ತಳೆಯುತ್ತಿದೆ? ಚೀನಾದ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಯುದ್ಧವನ್ನು ಸಾರುವುದಕ್ಕೆ ಯಾರೂ ಒತ್ತಾಯಿಸುತ್ತಿಲ್ಲ. ಆದರೆ, ಚೀನಾ ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಹೆಚ್ಚು ಆಕ್ರಮಣಕಾರಿ ವರ್ತನೆಗಳನ್ನು ಪ್ರದರ್ಶಿಸುತ್ತಿದೆ. ಗಲ್ವಾನ್ ಘರ್ಷಣೆಯಲ್ಲಿ ಸಂಭವಿಸಿದ ಸಾವು ನೋವುಗಳ ಬಳಿಕ, ಗಡಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಭಾರತ ಸ್ಪಷ್ಟಪಡಿಸುತ್ತಿಲ್ಲ. ಇದೇ ಸಂದರ್ಭದಲ್ಲಿ, ಭಾರತದ ಭೂಭಾಗದಲ್ಲಿ ಚೀನಾದಿಂದ ಹೆದ್ದಾರಿಯಂತಹ ಕಾಮಗಾರಿಗಳು ನಡೆಯುತ್ತಿವೆ ಎನ್ನುವ ವರದಿಗಳಿವೆ. ಇಂತಹ ವರದಿಗಳು, ಗಡಿಭಾಗದ ಜನರಲ್ಲಿರುವ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲ, ಕಾಶ್ಮೀರ, ಪಂಜಾಬ್‌ನಂತಹ ರಾಜ್ಯಗಳಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ದುಷ್ಕರ್ಮಿಗಳಿಗೆ ಇದು ಇನ್ನಷ್ಟು ಕುಮ್ಮಕ್ಕು ನೀಡಬಹುದು. ಗಡಿಯಲ್ಲಿ ಚೀನಾ ನಡೆಸುತ್ತಿರುವ ಅತಿಕ್ರಮಗಳ ಲಾಭವನ್ನು ತನ್ನದಾಗಿಸಲು ಪಾಕಿಸ್ತಾನ ಹೊಂಚು ಹಾಕಿ ಕೂತಿದೆ ಎನ್ನುವುದನ್ನು ಸರಕಾರ ಮರೆಯಬಾರದು.

ಚೀನಾ ವಿಷಯದಲ್ಲಿ ಅಮೆರಿಕವನ್ನೇ ಸರಕಾರ ಸಂಪೂರ್ಣವಾಗಿ ನಂಬಿ ಕೂರಬಾರದು. ಯುರೋಪ್ ರಾಷ್ಟ್ರಗಳು ರಶ್ಯವನ್ನು ಮಣಿಸಲು ಉಕ್ರೇನ್‌ನ್ನು ಹೇಗೆ ಕಾಲಾಳುವಾಗಿ ಬಳಸಿದವು ಎನ್ನುವುದು ನಮಗೆ ಪಾಠವಾಗಬೇಕು. ಇಂದು ಉಕ್ರೇನ್ ಭಾಗಶಃ ನಾಶವಾಗಿ ಬಿಟ್ಟಿದೆ. ರಶ್ಯ ವಿಶ್ವದ ಮುಂದೆ ಖಳನಾಯಕನಾಗಿ ಬಿಂಬಿತವಾಗಿದೆ. ಯುರೋಪ್ ರಾಷ್ಟ್ರಗಳು ಇದರಲ್ಲಿ ಕಳೆದುಕೊಂಡದ್ದು ಏನೂ ಇಲ್ಲ. ಅಮೆರಿಕ ಚೀನಾವನ್ನು ವಿರೋಧಿಸುತ್ತಲೇ, ಪಾಕಿಸ್ತಾನದ ಜೊತೆಗೆ ತನ್ನ ಸ್ನೇಹವನ್ನು ಮುಂದುವರಿಸಿದೆ. ಚೀನಾವನ್ನು ಮುಂದಿಟ್ಟುಕೊಂಡು ಅಮೆರಿಕ ಭಾರತದ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಲು ಯತ್ನಿಸುತ್ತಿದೆ. ಚೀನಾದ ಕೃತ್ಯಗಳ ವಿರುದ್ಧ ಅಮೆರಿಕ ತನ್ನ ಪ್ರತಿಭಟನೆಯನ್ನು ಈ ಹಿಂದೆ ಹಲವು ಬಾರಿ ಪ್ರಕಟಿಸಿದೆಯಾದರೂ, ಭಾರತದ ವಿರುದ್ಧ ಚೀನಾ ಯುದ್ಧವನ್ನು ಸಾರಿದರೆ ಅಮೆರಿಕ ಭಾರತದ ನೆರವಿಗೆ ಬಂದೀತು ಎಂದು ಭಾವಿಸುವಂತಿಲ್ಲ. ಯಾಕೆಂದರೆ, ಭಾರತಕ್ಕೆ ಹೋಲಿಸಿದರೆ ಚೀನಾ ಹಲವು ಪಟ್ಟು ಬಲಾಢ್ಯ ರಾಷ್ಟ್ರವಾಗಿದೆ. ಅಮೆರಿಕವೇನಾದರೂ ಆ ಸಂದರ್ಭದಲ್ಲಿ ಭಾರತವನ್ನು ಬೆಂಬಲಿಸಿದರೆ ಅದು ಮೂರನೇ ಮಹಾಯುದ್ಧ ಘೋಷಣೆಗೆ ಕಾರಣವಾದೀತು. ಉಕ್ರೇನ್ ವಿಷಯದಲ್ಲಿ ಯುರೋಪ್ ರಾಷ್ಟ್ರಗಳು ಸಹನೆಯನ್ನು ಕಾಪಾಡಿಕೊಂಡಿರುವುದು ಇದೇ ಕಾರಣಕ್ಕೆ. ಚೀನಾ ಜೊತೆಗಿನ ಸಂಬಂಧವನ್ನು ಯಾವುದೇ ದೇಶಗಳ ನೆರವಿಲ್ಲದೆ ಭಾರತ ಸ್ವತಃ ಉತ್ತಮ ಪಡಿಸಿಕೊಳ್ಳುವುದು ಸದ್ಯಕ್ಕಿರುವ ದಾರಿ.

ಪಾಕಿಸ್ತಾನದೊಂದಿಗೆ ವರ್ತಿಸಿದಂತೆ ಆಕ್ರಮಣಕಾರಿಯಾಗಿ ಚೀನಾದ ವಿರುದ್ಧ ವರ್ತಿಸಲು ಸಾಧ್ಯವಿಲ್ಲ ಎನ್ನುವುದು ಭಾರತಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಹೀಗಿರುವಾಗ, ಮಾತುಕತೆಯ ಮೂಲಕವೇ ಚೀನಾದ ಜೊತೆಗಿನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಬೇಕು. ಚೀನಾದೊಂದಿಗೆ ಮಾತುಕತೆಯ ಮೂಲಕ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಲು ಹೊರಡುವಾಗ, ಭಾರತವು ಇತರ ಸಣ್ಣ ಪುಟ್ಟ ದೇಶಗಳ ಜೊತೆಗೂ ತನ್ನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಬೇಕಾಗುತ್ತದೆ. ಕಾಶ್ಮೀರದಲ್ಲಿರುವ ಅತಂತ್ರತೆ ಚೀನಾದ ಜೊತೆಗಿನ ಸಂಬಂಧವನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಕಾಶ್ಮೀರದ ಮೇಲಿರುವ ಸೇನಾ ಹಿಡಿತವನ್ನು ಸಡಿಲಗೊಳಿಸಿ, ಅಲ್ಲಿ ಪ್ರಜಾಸತ್ತೆಯನ್ನು ಬಲಪಡಿಸುವ ಮೂಲಕ, ಗಡಿಭಾಗದ ಉದ್ವಿಗ್ನ ವಾತಾವರಣವನ್ನು ತಣ್ಣಗಾಗಿಸಬೇಕು. ಪರಸ್ಪರ ಅಪನಂಬಿಕೆಗಳನ್ನು ಇಲ್ಲವಾಗಿಸಬೇಕು. ಕೊಡುಕೊಳ್ಳುವಿಕೆಯ ಮೂಲಕ ಚೀನಾದ ಜೊತೆಗೆ ಸಾಂಸ್ಕೃತಿಕ, ಆರ್ಥಿಕ ಸಂಬಂಧವನ್ನು ವೃದ್ಧಿ ಪಡಿಸಬೇಕು. ಮಾತುಕತೆಯ ಮೂಲಕವಷ್ಟೇ ಚೀನಾದ ಜೊತೆಗಿನ ಗಡಿ ಸಂಘರ್ಷವನ್ನು ಇಲ್ಲವಾಗಿಸ ಬಹುದು. ಈ ನಿಟ್ಟಿನಲ್ಲಿ, ಅನಗತ್ಯ ಪ್ರತಿಷ್ಠೆಗಳನ್ನು ಬದಿಗಿಟ್ಟು ಸರ್ವಪಕ್ಷಗಳನ್ನು ಒಲಿಸಿಕೊಂಡು ಸರಕಾರ ಸೌಹಾರ್ದ ಹೆಜ್ಜೆಗಳನ್ನು ಮುಂದಿಡಬೇಕು. ಅರುಣಾಚಲಕ್ಕೆ ಕವಿದ ಮಂಜು ಸೌಹಾರ್ದದ ಅರುಣೋದಯದಲ್ಲಿ ಕರಗಿ ಹೋಗಲಿ.

Similar News