ಖಾಸಗಿ ಶಿಕ್ಷಣ ಸಂಸ್ಥೆಗಳು ಲಾಭದಾಯಕವಾಗಿ ಮಾರ್ಪಾಡಾಗಬೇಕಾಗಿದೆ: ನಿರ್ಮಲಾ ಸೀತಾರಾಮನ್

Update: 2023-04-07 15:28 GMT

ಬೆಂಗಳೂರು, ಎ.7: ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿಗಳ ಸರಿಸಮಾನ ವೇತನಕ್ಕಾಗಿ, ಉತ್ತಮ ಕಟ್ಟಡಗಳನ್ನು ನಿರ್ಮಿಸಲು, ಮೂಲಭೂತ ಸೌಕರ್ಯ ಉತ್ತಮ ಪಡಿಸಲು ಅದನ್ನು ಲಾಭದಾಯಕ ಸಂಸ್ಥೆಯಾಗಿ ಮಾರ್ಪಡಾಗಬೇಕಿದೆ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 

ಶುಕ್ರವಾರ ಜಯನಗರದ ಎನ್.ಎಂ.ಕೆ.ಆರ್.ವಿ. ಸಂಸ್ಥೆಯಲ್ಲಿ ಆಯೋಜಿಸಿದ್ದ ಆರ್.ವಿ. ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಕಾನೂನೂ ವ್ಯವಸ್ಥೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಲಾಭರಹಿತ ಸಂಸ್ಥೆಗಳಾಗಿ ವರ್ಗೀಕರಿಸಲಾಗಿತ್ತು. ಅವುಗಳು ಸ್ವಯಂ ಸೇವಾ ಸಂಸ್ಥೆಗಳ ರೀತಿಯಲ್ಲಿ ಯವುದೇ ಲಾಭಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಸಂವಿಧಾನದಲ್ಲೇ ಉಲ್ಲೇಖಿಸಲಾಗಿತ್ತು. 

ದೇಶದಲ್ಲಿ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಶಿಕ್ಷಣ ವ್ಯವಸ್ಥೆ, ವಿಶ್ವವಿದ್ಯಾನಿಲಯದ ರೀತಿಯಲ್ಲೇ ಉತ್ತಮ ಸೇವೆ ಸಲ್ಲಿಸಿವೆ. ನನ್ನ ಕಾಲೇಜು ಶಿಕ್ಷಣ ತಾಲೂಕು ಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ನನ್ನ ಸ್ವಂತ ಅನುಭವದಲ್ಲಿ ಎಂದೂ ನನಗೆ ಸಣ್ಣ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದೆ ಎನ್ನುವ ಅನಿಸಿಕೆ ಬಂದಿಲ್ಲ ಎಂದರು.

ಸರಕಾರ ಕಡು ಬಡವರ ಶಿಕ್ಷಣಕ್ಕಾಗಿ ತನ್ನ ವ್ಯವಸ್ಥೆಯನ್ನು ಮುಂದುವರೆಸಬೇಕಿದೆ. ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಸರಕಾರಿ ಶಿಕ್ಷಣ ಸಂಸ್ಥೆಗಳು ಸೇವೆಯನ್ನು ಒದಗಿಸುವ ಕೆಲಸ ಮಾಡುತ್ತಿವೆ ಮತ್ತು ಮುಂದೆಯೂ ಮಾಡಲಿವೆ. ಆದರೆ ಇದರ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿವೆ. ಈ ನಿಟ್ಟಿನಲ್ಲಿ ಆರ್.ವಿ. ಶಿಕ್ಷಣ ಸಂಸ್ಥೆಯೂ ಕೆಲಸ ಮಾಡಿ ತೋರಿಸಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ 21 ನೆಯ ಶತಮಾನದಲ್ಲಿ ಬುದ್ದಿಮ್ಮತ್ತೆ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ನಮ್ಮ ಹೊಸ ಶಿಕ್ಷಣ ನೀತಿ 100 ರಷ್ಟು ಮೊದಲಿಗಿಂತ ಉತ್ತಮವಾಗಿ ಹೊರ ಬಂದಿದೆ. ಸ್ಕಿಲ್ ಮತ್ತು ಸರ್ಟಿಫಿಕೇಟ್ ಎರಡೂ ಮುಖ್ಯವಾಗಿದೆ. ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ಗುಣಮಟ್ಟದ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಜನರ ಭವಿಷ್ಯ ನಿರ್ಣಯ ಮಾಡಬೇಕಾದರೆ ಗುಣಮಟ್ಟದ ಶಿಕ್ಷಣ ಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಪಿ. ಶ್ಯಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Similar News