ಸಾಮರಸ್ಯದ ಬದುಕು ನಮ್ಮದಾಗಬೇಕು: ಡಾ. ಎನ್ ಜಿ ಮೋಹನ್
ಕೊಣಾಜೆ: ಶಿಕ್ಷಣ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಬಾರದು, ನಿಜವಾದ ಶಿಕ್ಷಣವೆಂದರೆ ನಾವು ಜೀವನದಲ್ಲಿ ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ಕಲಿಸಿಕೊಡುವುದು ಆಗಿರುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಜಿಲ್ಲೆಯ ಮಾಜಿ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ಎನ್.ಜಿ.ಮೋಹನ್ ಅವರು ಹೇಳಿದರು.
ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಸೌಜನ್ಯ ಸ್ಕೌಟ್ ದಳ ಮತ್ತು ಗೈಡ್ ಕಂಪನಿಯ ವತಿಯಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ವಿನೂತನ ಶೈಲಿಯ ಬೇಸಿಗೆ ಶಿಬಿರ ಚಿಲುಮೆ 2023ನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ನೆರೆಹೊರೆಯವರನ್ನು ಪ್ರೀತಿಸುವ ಮಾನವೀಯತೆ ಗುಣವನ್ನು ಅಳವಡಿಸಿಕೊಳ್ಳುವ, ಸಾಮರಸ್ಯದ ಬದುಕಿನ ಕಲೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಇಂತಹ ಬೇಸಿಗೆ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಉಳ್ಳಾಲ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಎಂ ಎಚ್ ಮಲಾರ್ ರವರು ಸ್ಕೌಟಿಂಗ್ ಶಾಲೆ ಮತ್ತು ಕುಟುಂಬಕ್ಕೆ ಪೂರಕವಾಗಿದೆ. ಸ್ಕೌಟಿಂಗ್ ಸ್ವಯಂ-ಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಅನ್ವೇಷಿಸಲು ಮತ್ತು ತಿಳಿದುಕೊಳ್ಳಲು ಬಯಸುತ್ತದೆ. ಸ್ಕೌಟಿಂಗ್ ಕಲಿಯಲು ಮತ್ತು ಸುಸಜ್ಜಿತ ಜನರಾಗಲು ಕೌಶಲ್ಯಗಳನ್ನು ಕಲಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಪುರಸ್ಕಾರ ಪಡೆದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಾದ ರಿಕ್ಸನ್ ಪೌಲ್ ಲೋಬೊ ರಕ್ಷಿತಾ ಕುಮಾರಿ ವೀಕ್ಷ ಹಾಗೂ ತೃತೀಯ ಸೋಪಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಜಿಲ್ಲಾ ಪುರಸ್ಕಾರ ಪಡೆದ ಕ್ಷಮ, ಕ್ಷೇಮ, ನೇಹಾ, ನಿತೀಶ, ಸಾಕ್ಷಿ, ಸುರಕ್ಷಾ, ವೀಕ್ಷ ಜೆ ಪೂಜಾರಿ, ಪ್ರಜ್ಞಾ ಇವರುಗಳನ್ನು ಅಭಿನಂದಿಸಲಾಯಿತು.
ಸಮಾಜ ಸೇವಕರಾದ ಡಾ. ಎನ್ ಜಿ ಮೋಹನ್ ಮತ್ತು ಟಿಪ್ಪು ಸುಲ್ತಾನ್ ಪ್ರೌಢಶಾಲೆ ಕೋಟೆಪುರ ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ ಹೆಚ್ ಮಾಲಾರ್ ಅವರನ್ನು ಸನ್ಮಾನಿಸಲಾಯಿತು. ಸಭಾಧ್ಯಕ್ಷತೆ ಯನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಉಷಾಲತಾ ಅವರು ವಹಿಸಿದ್ದರು. ಸ್ಕೌಟ್ ಮಾಸ್ಟರ್ ತ್ಯಾಗಮ್ ಹರೇಕಳ ಪ್ರಸ್ತಾವನೆ ಯೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ರವಿಶಂಕರ್ ಸ್ವಾಗತಿಸಿ ಸಹ ಶಿಕ್ಷಕಿ ಮೋಹಿನಿ ವಂದಿಸಿದರು.