ಪದ್ಮನಾಭ ನಗರ ಕ್ಷೇತ್ರದ ಹೆಸರಿನಲ್ಲೇ 'ಕಮಲ' ಇದೆ: ಆರ್.ಅಶೋಕ್

''ಜೋತಿಷಿಗಳು ಹೇಳಿದ್ದಕ್ಕೆ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿರಬೇಕು''

Update: 2023-04-20 14:17 GMT

ಬೆಂಗಳೂರು, ಎ. 20: ‘ನಾನು ಕನಕಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದು, ಡಿ.ಕೆ.ಶಿವಕುಮಾರ್ ಅವರೂ ಪದ್ಮನಾಭ ನಗರಕ್ಕೆ ಬಂದು ಸ್ಪರ್ಧೆ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಒಂದು ವೇಳೆ ಅವರು ಸ್ಪರ್ಧೆ ಮಾಡಿದ್ದರೆ ರಾಜ್ಯದಲ್ಲಿ ಕನಕಪುರ ಮತ್ತು ಪದ್ಮನಾಭನಗರ ತೀವ್ರ ಕುತೂಹಲ ಕ್ಷೇತ್ರಗಳಾಗುತ್ತಿದ್ದವು.  ಆದರೆ, ಡಿಕೆಶಿ ಬರಲಿಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ‘ಡಿ.ಕೆ.ಶಿವಕುಮಾರ್ ಹೋಮ-ಹವನ, ಜ್ಯೋತಿಷ್ಯ ನಂಬುತ್ತಾರೆ. ಬಹುಶಃ ಸುರೇಶ್ ಅವರನ್ನು ತಮ್ಮ ಕ್ಷೇತ್ರದಲ್ಲಿ ನಿಲ್ಲಿಸಲು ಜ್ಯೋತಿಷಿಗಳು ಹೇಳಿರಬಹುದು. ಹೀಗಾಗಿ ಸಹೋದರ ಡಿ.ಕೆ.ಸುರೇಶ್ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.

‘ಹಲವು ಮಂದಿ ವಕೀಲರು, ಲೆಕ್ಕ ಪರಿಶೋಧಕರನ್ನು ಇಟ್ಟುಕೊಂಡವರಿಗೆ ಭಯ ಯಾಕೆ?. ಯಾರು ಯಾರೋ ಕನ್ನಡ ಬಾರದವರೆಲ್ಲ ಹೋಗಿ ಕನ್ನಡದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅಂತಹÀದ್ದರಲ್ಲಿ ಅವರಿಗೆ ಭಯ ಯಾಕೆ ಬಂದಿದೆಯೋ ಗೊತ್ತಿಲ್ಲ. ನಾನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ್ದಂತೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಫಲಾಫಲವನ್ನು ಭಗವಂತನಿಗೆ ಬಿಟ್ಟಿದ್ದೇನೆ’ ಎಂದು ಅಶೋಕ್ ನುಡಿದರು. 

‘ಪದ್ಮನಾಭ ನಗರ ಕ್ಷೇತ್ರದ ಹೆಸರಿನಲ್ಲೇ ಕಮಲ ಇದೆ. ‘ಪದ್ಮ’ ಎಂದರೆ ಕಮಲ. ಇಲ್ಲಿ ಸ್ವಾಭಾವಿಕವಾಗಿಯೇ ಕಮಲ ಅರಳಲಿದೆ. ಯಾರು ಬಂದರೂ ಗೆಲ್ಲಲು ಸಾಧ್ಯವಿಲ್ಲ. ಯಾರು ಬಂದರೂ ನಡೆಯುವುದಿಲ್ಲ. ಹಾಗಾಗಿ ಅವರು ಬಂದಿಲ್ಲ. ಅವರು ಕನಕಪುರದಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಹೋರಾಟ ನಡೆಸುತ್ತೇನೆ. ಶಕ್ತಿ ಮೀರಿ ಪ್ರಯತ್ನ ನಡೆಸುತ್ತೇನೆ’ ಎಂದು ಅಶೋಕ್ ಹೇಳಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಕೊಟ್ಟಿರುವ ಟಾಸ್ಕ್ ನಿರ್ವಹಿಸುತ್ತೇನೆ. ನನಗೆ ಎರಡು ಕಡೆ ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ಕಡೆ ಪ್ರಚಾರ ಮಾಡಬೇಕಿದೆ. ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸದೊಂದಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದೇನೆ’ ಎಂದು ಅಶೋಕ್ ಹೇಳಿದರು.

Similar News