ಉದ್ಯೋಗ ಸಿಗದೆ ಬಿಜೆಪಿ ಅವಧಿಯಲ್ಲಿ 1,129 ಯುವಕರು ಆತ್ಮಹತ್ಯೆ: ರಮೇಶ್ ಬಾಬು ಆರೋಪ

Update: 2023-04-24 16:16 GMT

ಬೆಂಗಳೂರು, ಎ.24: ಉದ್ಯೋಗ ಸಿಗದ ಕಾರಣಕ್ಕೆ ಬಿಜೆಪಿ ಅವಧಿಯಲ್ಲಿ 1,129 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳಿಗೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆಪಾದಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಶಿಕ್ಷಣ ಇಲಾಖೆಯಲ್ಲಿ ಅತಿಹೆಚ್ಚು ಉದ್ಯೋಗ ಖಾಲಿ ಇದ್ದು, 50-60 ಸಾವಿರ ಖಾಲಿ ಉದ್ಯೋಗಗಳಿವೆ. ಅನುಮೋದನೆ ಇದ್ದರೂ ಸರಕಾರ ಅದನ್ನು ಭರ್ತಿ ಮಾಡಿಲ್ಲ. ಇನ್ನು ಪಿಎಸ್‍ಐ ನೇಮಕಾತಿಗೆ 1.25ಲಕ್ಷ ಆಕಾಂಕ್ಷಿಗಳು ಅರ್ಜಿ ಹಾಕಿದ್ದರು. ಆದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕಾರಣ ಇವರ ಕನಸು ನುಚ್ಚುನೂರಾಗಿವೆ. ಎಲ್ಲ ಇಲಾಖೆ ನೇಮಕಾತಿಯಲ್ಲೂ ಅಕ್ರಮ ನಡೆದಿದ್ದು, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ 2.50 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ. ಇದರ ಹೊರತಾಗಿ 7-8 ಲಕ್ಷ ಖಾಸಗಿ ಉದ್ಯೋಗಗಳಿಗೆ ಅವಕಾಶವಿದೆ. ದುರಂತವೆಂದರೆ ರಾಜ್ಯ ಸರಕಾರ ಪ್ರತಿ ತಿಂಗಳು ಉದ್ಯೋಗ ಮೇಳ ಮಾಡುತ್ತಿದೆ. ಕೈಗಾರಿಕಾ ಸಚಿವ ನಿರಾಣಿ ಅವರ ಖಾತೆಯಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಈ ಇಲಾಖೆ ಉದ್ಯೋಗ ನೀಡುವ ಬದಲು ಖಾಸಗಿ ಕಂಪನಿಗಳಿಗೆ ಭೂಮಿ ನೀಡುವುದು, ಅವರಿಂದ 40 ಪರ್ಸೆಂಟ್ ಕಮಿಷನ್ ಪಡೆಯುವ ಕೆಲಸ ಆಗುತ್ತಿದೆ. ಇನ್ನು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಆ ಉದ್ಯೋಗಗಳೆಲ್ಲ ಎಲ್ಲಿ ಹೋದವು ಎಂದು ರಮೇಶ್ ಬಾಬು ಪ್ರಶ್ನಿಸಿದರು.

ಇಷ್ಟೆಲ್ಲಾ ಅಕ್ರಮಗಳು ನಡೆದರೂ ಬೊಮ್ಮಾಯಿ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರು ಜೇವರ್ಗಿಯ ಯುವಕನ ಮನೆಗೆ ಭೇಟಿ ನೀಡಿ, ಆತನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಬೇಕು. ರಾಜ್ಯದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಸರಕಾರ ವಿಫಲವಾಗಿದ್ದೇಕೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ರಮೇಶ್ ಬಾಬು ತಿಳಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಂಶುಲ್ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರು ಕಂಗೆಟ್ಟಿದ್ದಾರೆ. ಜೇವರ್ಗಿಯ ನಿರುದ್ಯೋಗಿ ಯುವಕ ಸಿದ್ದು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಚಾರ. ಇದು ರಾಜ್ಯ ಸರಕಾರದ ವೈಫಲ್ಯಕ್ಕೆ ಸಾಕ್ಷಿ ಎಂದರು.

ಇಷ್ಟು ದಿನಗಳ ಕಾಲ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳನ್ನು ನೋಡುತ್ತಿದ್ದೆವು. ಆದರೆ ಈಗ ಉದ್ಯೋಗ ಸಿಗದ ಯುವಕರು ಕೂಡ ಆತ್ಮಹತ್ಯೆಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಈ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಅಂಶುಲ್ ತಿಳಿಸಿದರು.

ನಿರುದ್ಯೋಗಿ ಯುವಕರ ಸಮಸ್ಯೆಗೆ ಪರಿಹಾರವಾಗಿ ಕಾಂಗ್ರೆಸ್ ಯುವನಿಧಿ ಯೋಜನೆ ಘೋಷಿಸಿದ್ದು, ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು 1500 ರೂ. ನೀಡಲಾಗುವುದು. ಇನ್ನು ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ಅಂಶುಲ್ ಭರವಸೆ ನೀಡಿದರು.

Similar News