ರಾಜ್ಯಪಾಲರ ರಾಜಕೀಯ

Update: 2023-04-25 05:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಬಿಜೆಪಿಯೇತರ ರಾಜ್ಯ ಸರಕಾರಗಳಿಗೆ ಕಿರುಕುಳ ನೀಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ರಾಜ ಭವನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ. ಪ್ರತಿ ಪಕ್ಷಗಳನ್ನೆಲ್ಲ ನಿರ್ನಾಮ ಮಾಡಿ ಏಕಪಕ್ಷದ ಮತ್ತು ಏಕ ವ್ಯಕ್ತಿಯ ಸರ್ವಾಧಿಕಾರವನ್ನು ಭಾರತದ ಮೇಲೆ ಹೇರಲು ಹೊರಟಿರುವ ಬಿಜೆಪಿ ಸರಕಾರದ ವಿರುದ್ಧ ರಾಜ್ಯಗಳು ಧ್ವನಿಯೆತ್ತಬೇಕಾಗಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರ ಸರಕಾರದ ಏಜೆಂಟರಂತೆ ಚುನಾಯಿತ ಸರಕಾರಗಳಿಗೆ ಕಾಟ ಕೊಡುತ್ತಿದ್ದಾರೆ.

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆ ರಾಜ್ಯಗಳ ವಿಧಾನ ಸಭೆಗಳು ಅನುಮೋದನೆ ನೀಡಿದ ವಿಧೇಯಕಗಳಿಗೆ ಒಪ್ಪಿಗೆ ನೀಡುತ್ತಿರುವುದಕ್ಕೆ ರಾಜ್ಯಪಾಲರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಹಾಗೂ ಕೇರಳದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಮತ್ತು ತೆಲಂಗಾಣ ಹಾಗೂ ಛತ್ತೀಸ್‌ಗಡ ರಾಜ್ಯಗಳ ರಾಜ್ಯಪಾಲರು ಆಯಾ ರಾಜ್ಯಗಳ ಶಾಸನ ಸಭೆಗಳು ಅಂಗೀಕರಿಸಿರುವ ವಿಧೇಯಕಗಳಿಗೆ ಅಂಕಿತ ಹಾಕದೇ ನಕಾರಾತ್ಮಕ ಧೋರಣೆಯನ್ನು ತಾಳಿದ್ದಾರೆ. ಶಾಸನಸಭೆಗಳ ವಿಧೇಯಕಗಳಿಗೆ ನಿರ್ದಿಷ್ಟ ಕಾಲ ಮಿತಿಯಲ್ಲಿ ಅಂಕಿತ ಹಾಕಿ ಕಳಿಸುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಈ ಕರ್ತವ್ಯ ಪಾಲನೆಯಲ್ಲಿ ವಿಫಲರಾದ ರಾಜ್ಯಪಾಲರ ವಿರುದ್ಧ ತಮಿಳುನಾಡಿನ ಡಿಎಂಕೆ ಸರಕಾರವು ಕೇಂದ್ರ ಹಾಗೂ ರಾಷ್ಟ್ರಪತಿಗಳಿಗೆ ದೂರು ನೀಡಿದೆ. ಮಾತ್ರವಲ್ಲದೆ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಅಂಕಿತ ಹಾಕಿ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರಕಾರ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಮಾಡುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆ ಇತ್ತೀಚೆಗೆ ಅಂಗೀಕರಿಸಿದೆ.

ತಮಿಳುನಾಡು ಮಾತ್ರವಲ್ಲ ಕೇರಳ ಸರಕಾರವೂ ಇದೇ ಮಾದರಿಯ ನಿರ್ಣಯವನ್ನು ಅಂಗೀಕರಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ವಿಧಾನಸಭೆ ಅಂಗೀಕರಿಸಿದ ವಿಧೇಯಕವೊಂದಕ್ಕೆ ಅಂಕಿತ ಹಾಕುವಲ್ಲಿ ತೆಲಂಗಾಣ ರಾಜ್ಯಪಾಲರು ಅನುಸರಿಸುತ್ತಿರುವ ವಿಳಂಬ ನೀತಿ ಕಾನೂನು ಬಾಹಿರ, ಸಂವಿಧಾನ ವಿರೋಧಿ ಹಾಗೂ ಅಕ್ರಮ ಎಂದು ಘೋಷಿಸುವಂತೆ ತೆಲಂಗಾಣ ರಾಜ್ಯ ಸರಕಾರವು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ.

ಸಂವಿಧಾನದ ನಿಯಮಾವಳಿ ಪ್ರಕಾರ ರಾಜ್ಯಗಳ ಶಾಸನ ಸಭೆಗಳು ಅನುಮೋದನೆ ನೀಡಿದ ವಿಧೇಯಕಗಳು ಜಾರಿಯಾಗಬೇಕೆಂದರೆ ರಾಜ್ಯಪಾಲರ ಅಂಕಿತ ಬೇಕು. ಈ ಸಂಬಂಧದಲ್ಲಿ ಸಂವಿಧಾನವು ರಾಜ್ಯಪಾಲರಿಗೆ ಮೂರು ಆಯ್ಕೆಯನ್ನು ನೀಡಿದೆ. ಮೊದಲನೆಯದು ವಿಧೇಯಕಕ್ಕೆ ಅಂಕಿತ ಹಾಕುವುದು, ಎರಡನೆಯದು ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳಿಸಿಕೊಡುವುದು, ಮೂರನೆಯದು ಅಂಕಿತ ಹಾಕದೇ ಈ ವಿಧೇಯಕವನ್ನು ತಮ್ಮ ಅಭಿಪ್ರಾಯಗಳ ಸಹಿತ ಸಂಬಂಧಿಸಿದ ಶಾಸನ ಸಭೆಗಳಿಗೆ ಸಾಧ್ಯವಾದಷ್ಟು ಬೇಗ ವಾಪಸ್ ಕಳುಹಿಸುವುದು. ಹೀಗೆ ವಾಪಸ್ ಕಳುಹಿಸಿದ ಸಂದರ್ಭದಲ್ಲಿ ಶಾಸನಸಭೆಯು ಈ ವಿಧೇಯಕಕ್ಕೆ ಮತ್ತೆ ಅನುಮೋದನೆ ನೀಡಿದರೆ ರಾಜ್ಯಪಾಲರು ಸದರಿ ವಿಧೇಯಕಕ್ಕೆ ಸಹಿ ಹಾಕಲೇಬೇಕು ಬೇರೆ ಆಯ್ಕೆಗಳಿಲ್ಲ.

ಸಂವಿಧಾನದ ಪ್ರಕಾರ ರಾಜ್ಯಪಾಲರು ಈ ಮೂರರಲ್ಲಿ ಒಂದು ತೀರ್ಮಾನಕ್ಕೆ ಬರಲೇಬೇಕು. ವಿಧಾನಸಭೆ ಅಂಗೀಕರಿಸಿರುವ ವಿಧೇಯಕವೊಂದನ್ನು ರಾಜ್ಯಪಾಲರು ಎಷ್ಟು ಕಾಲ ತಮ್ಮ ಬಳಿ ಅಂಕಿತ ಹಾಕದೇ ಇಟ್ಟುಕೊಳ್ಳಬಹುದು ಎಂಬುದಕ್ಕೆ ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಕೆಲವು ರಾಜ್ಯಪಾಲರು ಸಂವಿಧಾನದ ಈ ಅಂಶವನ್ನೇ ಬಳಸಿಕೊಂಡು ವಿಧೇಯಕಗಳಿಗೆ ಅಂಕಿತ ಹಾಕಲು ಬೇಕಂತಲೇ ವಿಳಂಬ ಮಾಡುತ್ತಿದ್ದಾರೆ. ವಿಧೇಯಕವನ್ನು ತಡೆಹಿಡಿಯುವುದೆಂದರೆ ಅದನ್ನು ತಿರಸ್ಕರಿಸಿದಂತೆ ಎಂದು ತಮಿಳುನಾಡು ರಾಜ್ಯಪಾಲರು ಹೇಳಿರುವುದು ಸರಿಯಲ್ಲ. ಸಂವಿಧಾನಕ್ಕೆ ತಮ್ಮ ಮನಸ್ಸಿಗೆ ಬಂದ ವ್ಯಾಖ್ಯಾನ ನೀಡಿ ವಿಧೇಯಕವೊಂದನ್ನು ತಿರಸ್ಕರಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ. ಇಂಥ ಸಂದರ್ಭಗಳಲ್ಲಿ ರಾಜ್ಯಪಾಲರು ರಾಜ್ಯದ ಸಚಿವ ಸಂಪುಟದ ಸಲಹೆ ಮತ್ತು ನೆರವು ಪಡೆದು ಮುಂದಿನ ಕ್ರಮವನ್ನು ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಅನೇಕ ಬಾರಿ ಸ್ಪಷ್ಟಪಡಿಸಿವೆ.ಕಾನೂನು ರೂಪಿಸುವ ಮತ್ತು ಇರುವ ಕಾನೂನನ್ನು ವಾಪಸ್ ಪಡೆಯುವ ಅಧಿಕಾರ ಇರುವುದು ಶಾಸನಸಭೆಗಳಿಗೆ ಮಾತ್ರ. ಆದ್ದರಿಂದ ಶಾಸನ ರಚಿಸುವ ವಿಧಾನಸಭೆಯ ಅಧಿಕಾರದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವುದು ಸರಿಯಲ್ಲ.

ಶಾಸನಸಭೆಗಳು ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕದೇ ಸುಮ್ಮನೆ ಕುಳಿತುಕೊಳ್ಳುವುದು ರಾಜ್ಯಪಾಲರು ಶಾಸನ ಸಭೆಗಳನ್ನು ಅವಮಾನಿಸಿದಂತಲ್ಲದೆ ಬೇರೇನೂ ಅಲ್ಲ. ವಿಧೇಯಕಗಳು ಕಾಯ್ದೆಗಳಾಗದಂತೆ ತಡೆಯುವ ಮೂಲಕ ರಾಜ್ಯಪಾಲರು ರಾಜ್ಯದ ಆಡಳಿತದ ನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಯಾವುದೇ ಕಾನೂನು ರಾಜ್ಯಕ್ಕೆ ಉಪಯುಕ್ತ ಎಂಬುದನ್ನು ತೀರ್ಮಾನಿಸುವ ಅಧಿಕಾರ ಇರುವುದು ಅಲ್ಲಿನ ವಿಧಾನಸಭೆಗೆ ಮಾತ್ರ. ಯಾವುದೇ ಕಾಯ್ದೆಗಳನ್ನು ಜಾರಿಗೊಳಿಸುವುದು ಅಲ್ಲಿನ ಸರಕಾರದ ಹೊಣೆಗಾರಿಕೆ. ಇದರಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಅನಗತ್ಯ.

ವಾಸ್ತವವಾಗಿ ರಾಜ್ಯಪಾಲರ ಹುದ್ದೆಯೇ ಬೊಕ್ಕಸಕ್ಕೆ ಭಾರವಾಗಿದೆ.ರಾಜಭವನಗಳು ನಿವೃತ್ತ ಇಲ್ಲವೇ ಅತೃಪ್ತ ರಾಜಕಾರಣಿಗಳ ಗಂಜಿ ಕೇಂದ್ರಗಳಾಗಿವೆ. ಕೇಂದ್ರ ಸರಕಾರದ ಏಜೆಂಟರಂತೆ ರಾಜ್ಯಪಾಲರು ವರ್ತಿಸುತ್ತ ಬಂದಿದ್ದಾರೆ. ಅಂತಲೇ ಈ ಹುದ್ದೆಯ ಔಚಿತ್ಯದ ಬಗ್ಗೆ ಅನೇಕ ಬಾರಿ ಚರ್ಚೆಗಳು ನಡೆದಿವೆ.
ಕೇಂದ್ರದ ಅಧಿಕಾರ ಸೂತ್ರವನ್ನು ಹಿಡಿದ ಪಕ್ಷಗಳು ರಾಜ್ಯಪಾಲರನ್ನು ಬಳಸಿಕೊಂಡು ಭಿನ್ನ ಪಕ್ಷದ ಸರಕಾರಕ್ಕೆ ಕಿರುಕುಳ ನೀಡುತ್ತ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇಂಥ ಕಿರುಕುಳ ಹೆಚ್ಚಾಗಿದೆ. ಸರಕಾರದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪದ ವಿರುದ್ಧ ರಾಜ್ಯ ಸರಕಾರಗಳು ಒಕ್ಕೊರಲಿನಿಂದ ಧ್ವನಿಯೆತ್ತಬೇಕಾಗಿದೆ.

Similar News