×
Ad

ಬೆಂಗಳೂರು | ರ‍್ಯಾಪಿಡೊ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದ ಯುವತಿ!

ಆರೋಪಿ ದೀಪಕ್‌ ರಾವ್‌ ಬಂಧನ

Update: 2023-04-26 11:08 IST

ಬೆಂಗಳೂರು: ರ‍್ಯಾಪಿಡೋ  ಬೈಕ್‌  ಚಾಲಕನೊಬ್ಬ ಯುವತಿಗೆ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ತಪ್ಪಿಸಿಕೊಳ್ಳಲು ಆಕೆ ಚಲಿಸುತ್ತಿದ್ದ ಬೈಕ್‌’ನಿಂದ ಜಿಗಿದಿರುವ ಘಟನೆ ವರದಿಯಾಗಿದೆ.

ಬೆಂಗಳೂರಿನ ಇಂದಿರಾನಗರದಲ್ಲಿ ಎ. 21ರಂದು ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಪ್ರಕರಣ ಸಂಬಂಧ ಯಲಹಂಕ ಉಪನಗರ ಪೊಲೀಸರು ರ‍್ಯಾಪಿಡೋ ಬೈಕ್‌ ಚಾಲಕ ದೀಪಕ್‌ ರಾವ್‌ (27)ನನ್ನು ಬಂಧಿಸಿ ಯುವತಿಯಿಂದ ಕಿತ್ತುಕೊಂಡಿದ್ದ ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.‌

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಯು ಎ. 21ರಂದು ರಾತ್ರಿ 11.30ರ ಸುಮಾರಿನಲ್ಲಿ ಆನ್‌ಲೈನ್‌ ಆ್ಯಪ್ ಮೂಲಕ ರ‍್ಯಾಪಿಡೊ ಬೈಕ್ ಅನ್ನು ಬುಕ್‌ ಮಾಡಿದ್ದಳು. ನಿಗದಿತ ಸ್ಥಳಕ್ಕೆ ಬಂದ ರ‍್ಯಾಪಿಡೊ ಬೈಕ್‌ ಚಾಲಕ ಯುವತಿಯನ್ನು ಹತ್ತಿಸಿಕೊಂಡಿದ್ದು, ಅಲ್ಲಿಂದ ಇಂದಿರಾನಗರಕ್ಕೆ ಬೈಕ್‌ ತೆರಳಬೇಕಿತ್ತು. ಆದರೆ, ಆತ ಅಲ್ಲಿಗೆ ಕರೆದೊಯ್ಯದೇ ಒಟಿಪಿ ಪರಿಶೀಲಿಸುವ ನೆಪದಲ್ಲಿ ಆಕೆಯ ಫೋನ್ ತೆಗೆದುಕೊಂಡು ದೊಡ್ಡಬಳ್ಳಾಪುರಕ್ಕೆ ಹೋಗಲು ಯತ್ನಿಸಿದ್ದಾನೆನ್ನಲಾಗಿದೆ.

ಇದರಿಂದ ಯುವತಿಗೆ ಭಯ ಶುರುವಾಗಿದೆ. ಜೊತೆಗೆ ಲೈಂಗಿಕ ಕಿರುಕುಳ ಸಹಿಸಲಾಗದೇ ಯುವತಿ ಬೈಕ್​ನಿಂದ ಜಿಗಿದಿದ್ದಾಳೆ. ಯುವತಿಯು ಬೈಕ್​ನಿಂದ ಜಿಗಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

Similar News