ಕರಾವಳಿಯಲ್ಲಿ ಎಸ್‌ಡಿಪಿಐ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ: ಯು.ಟಿ. ಖಾದರ್

Update: 2023-04-30 13:06 GMT

ಮಂಗಳೂರು: ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕೋಮು ಧ್ರುವೀಕರಣಗೊಂಡಿರುವ ದಕ್ಷಿಣ ಕನ್ನಡದಲ್ಲಿ ಎಸ್‌ಡಿಪಿಐ ಪಕ್ಷದ  ಬಗ್ಗೆ ಕಾಂಗ್ರೆಸ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದು ಮಾಜಿ ಸಚಿವ ಹಾಗೂ ಮಂಗಳೂರು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.

PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, "ನಮ್ಮ ಮತ ಬ್ಯಾಂಕಿಗೆ ಎಸ್‌ಡಿಪಿಐನಿಂದ ಯಾವುದೇ ಧಕ್ಕೆಯಾಗಲಿದೆ ಎಂದು ನನಗನ್ನಿಸುತ್ತಿಲ್ಲ. ಅವರ ಕೋಮುವಾದಿ ಕಾರ್ಯಸೂಚಿಯನ್ನು ಜನತೆ ಬೆಂಬಲಿಸುವುದಿಲ್ಲ" ಎಂದಿರುವ ಯು.ಟಿ. ಖಾದರ್, ಈ ಭಾಗದ ಜನತೆ ಬಡತನ, ನಿರುದ್ಯೋಗ ಹಾಗೂ ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆಯ ಬಗ್ಗೆ ಹೆಚ್ಚು ಕಳವಳಗೊಂಡಿದ್ದಾರೆ. ಕಾಂಗ್ರೆಸ್ ಮಾತ್ರ ಈ ವಿಷಯಗಳನ್ನು ಚುನಾವಣಾ ಪ್ರಚಾರದಲ್ಲಿ ಜನರ ಮುಂದಿಡುತ್ತದೆ ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಎಲ್ಲರಿಗಾಗಿಯೂ ಇದ್ದು, ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿಯಲು ಹಾಗೂ ಅವರನ್ನು ರಕ್ಷಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕೊನೆಗೆ ಮತದಾರರಿಗೆ ಈ ವಿಷಯ ಮನವರಿಕೆಯಾಗಲಿದೆ" ಎಂದೂ ತಿಳಿಸಿದ್ದಾರೆ.

"ನಾವು ಸಂವಿಧಾನವನ್ನು ಉಳಿಸಲು ಪ್ರಯತ್ನಿಸಿದಾಗ, ಅಲ್ಪಸಂಖ್ಯಾತರ ಹಕ್ಕುಗಳೂ ರಕ್ಷಣೆಗೊಳಗಾಗುತ್ತವೆ. ಈ ಬಾರಿ  ಮತದಾರರು ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ತರಲು ಮತ ಚಲಾಯಿಸಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್‌ಡಿಪಿಐ ಕಾಂಗ್ರೆಸ್ ಮತ ಬ್ಯಾಂಕ್ ಅನ್ನು ವಿಭಜಿಸಲಿದೆಯೇ  ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ದಕ್ಷಿಣ ಕನ್ನಡದಲ್ಲಿ ಅವರಿಗೆ ಸೀಮಿತ ಪ್ರಭಾವ ಮಾತ್ರವಿದೆ ಎಂದು ಹೇಳಿದ್ದಾರೆ.

"ಭಾರತೀಯ ಜನತಾ ಪಕ್ಷವೀಗ ರಾಜ್ಯದಲ್ಲಿ ಮರಣಶಯ್ಯೆಯಲ್ಲಿದೆ. ಅವರನ್ನು ರಕ್ಷಿಸುವ ಕರ್ತವ್ಯ ಎಸ್‌ಡಿಪಿಐ‌ನದ್ದಾಗಿದೆ" ಎಂದು ಹೇಳಿರುವ ಖಾದರ್, "ನಾವು ಎರಡೂ ಪಕ್ಷಗಳ ಕೋಮು ರಾಜಕಾರಣವನ್ನು ವಿರೋಧಿಸುತ್ತೇವೆ" ಎಂದಿದ್ದಾರೆ.

ಈ ಭಾಗದಲ್ಲಿ ಎಸ್‌ಡಿಪಿಐ ಪಕ್ಷದ ಶೇಕಡ ಎರಡ್ಮೂರು ಮತ ಗಳಿಕೆ ಪ್ರಮಾಣದಿಂದ ಚುನಾವಣೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದಿರುವ ಕಾಂಗ್ರೆಸ್ ನಾಯಕ ಖಾದರ್, "ಅವರು ನಮ್ಮ ವಿರುದ್ಧ ಸ್ಪರ್ಧಿಸಿದಾಗಲೇ ಕಾಂಗ್ರೆಸ್ ಗೆಲುವು ಸಾಧಿಸಿದೆ ಮತ್ತು ಜನ ನಮ್ಮೊಂದಿಗಿದ್ದಾರೆ ಎಂಬುದು ನಮಗೆ ತಿಳಿದಿದೆ" ಎಂದು ಹೇಳಿದ್ದಾರೆ.

ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಬಿಜೆಪಿ ಸರ್ಕಾರದ ವೈಫಲ್ಯಗಳತ್ತ ಕಾಂಗ್ರೆಸ್ ಗಮನ ಹರಿಸಲಿದ್ದು, ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪಕ್ಷವು ಗಮನಾರ್ಹವಾಗಿ ತನ್ನ ಸಾಧನೆಯನ್ನು ಸುಧಾರಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರಾವಳಿ ಭಾಗವು ಹಿಂದುತ್ವ ರಾಜಕೀಯದ ಪ್ರಯೋಗ ಶಾಲೆ ಎಂಬ ವ್ಯಾಖ್ಯಾನವು ಎಲ್ಲ ಬಾರಿಯೂ ಸರಿಯಲ್ಲ. ಜನರು ಪ್ರತಿ ಚುನಾವಣೆಯಲ್ಲೂ ವಿಭಿನ್ನ ಪಕ್ಷಗಳನ್ನು ಚುನಾಯಿಸಿದ್ದಾರೆ ಎಂದು ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.

2008ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ ಸುಳ್ಯ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು ಎಂಬುದನ್ನು ಸ್ಮರಿಸಿರುವ ಅವರು, 2018ರ ಚುನಾವಣೆಯಲ್ಲಿ ಕೆಲವು ನಿರ್ದಿಷ್ಟ ವಿಷಯಗಳ ಅಪಪ್ರಚಾರದಿಂದ  ಕಾಂಗ್ರೆಸ್ ಸೋಲನುಭವಿಸಿತು ಎಂದು ಹೇಳಿದ್ದಾರೆ.

"ಅವರ (ಬಿಜೆಪಿ) ಒಡೆದಾಳುವ ರಾಜಕೀಯದಿಂದ ರಾಜ್ಯದಲ್ಲೀಗ ಬಲವಾದ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದ್ದು, ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಜನತೆಗೆ ಮನವರಿಕೆಯಾಗಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟಿದ್ದ ಶೇ. 4 ಮೀಸಲಾತಿಯನ್ನು ರದ್ದುಗೊಳಿಸಿ, ಅವರನ್ನು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಖಾದರ್, ಯಾವುದೇ ಸಮುದಾಯದ ಚಾಲ್ತಿಯಲ್ಲಿರುವ ಮೀಸಲಾತಿಯನ್ನು ರದ್ದುಗೊಳಿಸುವುದು ಸರಿಯಲ್ಲ ಎಂದಿದ್ದಾರೆ.

ಈ ನಿರ್ಧಾರವು ಬಿಜೆಪಿಯ  ಸಮಾಜವನ್ನು ನಿರಂತರವಾಗಿ ಧ್ರುವೀಕರಣಗೊಳಿಸುವ ಪ್ರಯತ್ನ ಹಾಗೂ ಅದರಿಂದ ರಾಜಕೀಯ ಲಾಭ ಪಡೆಯುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.

ಖಾದರ್ ಸತತ ಐದನೆಯ ಬಾರಿ ಮಂಗಳೂರು (ಇದಕ್ಕೂ ಮುನ್ನ ಉಳ್ಳಾಲ) ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಈ ಹಿಂದಿನ ಎಲ್ಲ ನಾಲ್ಕು ಚುನಾವಣೆಗಳಲ್ಲೂ ಅವರು ಗೆಲುವು ಸಾಧಿಸಿದ್ದಾರೆ.

Similar News