ಪರಿಶಿಷ್ಟ ಜಾತಿಗಳ ಒಳಮೀಸಲಾತಿ | ಸರಕಾರಿ ಆದೇಶವಾಗದೆ ಕೇಂದ್ರಕ್ಕೆ ಶಿಫಾರಸ್ಸು ಹೇಗೆ ಸಾಧ್ಯ?: ಪ್ರೊ.ರವಿವರ್ಮ ಕುಮಾರ್

Update: 2023-04-30 17:08 GMT

ಬೆಂಗಳೂರು, ಎ.30: ‘ಬಿಜೆಪಿ ನಾಯಕರು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿದ್ದೇವೆಂದು ಸಂಭ್ರಮಾಚರಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಾಗಿರುವುದು ಸುಳ್ಳು’ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ತಿಳಿಸಿದ್ದಾರೆ.  

ರವಿವಾರ ಇಲ್ಲಿನ ಗಾಂದಿ ಭವನದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯು ಆಯೋಜಿಸಿರುವ ‘ಪ್ರೊ.ಬಿ.ಕೃಷ್ಣಪ್ಪ ಅವರ ಪರಿನಿಬ್ಬಾಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಳ ಮೀಸಲಾತಿಯ ಕುರಿತು ಸರಕಾರದ ಆದೇಶವೇ ಆಗಿಲ್ಲ. ಆದರೆ ಒಳ ಮೀಸಲಾತಿಯನ್ನು ಜಾರಿ ಮಾಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಟೀಕಿಸಿದರು. 

ಕೇವಲ ಸಚಿವ ಸಂಪುಟದಲ್ಲಿ ನಡೆದ ಚರ್ಚೆಗಳಿಗೆ ಸಹಿಯನ್ನು ಮಾತ್ರ ಮಾಡಲಾಗಿದೆಯೇ ಹೊರತು ಸರಕಾರದ ಅಧಿಕೃತ ಆದೇಶವಲ್ಲ. ಅಲ್ಲದೆ, ಅದು ರಾಜ್ಯಪಾಲರ ಕಚೇರಿಗೂ ಹೋಗಿಲ್ಲ. ಇನ್ನು ಕೇಂದ್ರ ಸರಕಾರಕ್ಕೆ ಹೇಗೆ ಶಿಫಾರಸ್ಸು ಮಾಡಲು ಸಾಧ್ಯ? ಸಚಿವ ಸಂಪುಟ ನಡಾವಳಿಗಳನ್ನು ಇಟ್ಟುಕೊಂಡು ಪರಿಶಿಷ್ಟರ ಒಳಮೀಸಲಾತಿಯನ್ನು ಜಾರಿ ಮಾಡುವಂತೆ ಕೋರ್ಟ್‍ನಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ’ ಎಂದು ರವಿವರ್ಮ ಕುಮಾರ್ ಹೇಳಿದರು. 

ಒಳಮೀಸಲಾತಿಯನ್ನು ಜಾರಿ ಮಾಡಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿಯನ್ನು ತರಬೇಕು. ಆದರೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರಕ್ಕೆ ರಾಜ್ಯಕ್ಕೆ ಇಲ್ಲ. ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.17ಕ್ಕೆ ಹೆಚ್ಚಿಸಿ, ಒಳಮೀಸಲಾತಿಯ ಅಂಕಿ-ಅಂಶಗಳನ್ನು ನಿರ್ಧರಿಸಲಾಗಿದೆ. ಆದರೆ ಮೀಸಲಾತಿ ಪ್ರಮಾಣವೇ ಹೆಚ್ಚಳವಾಗಿಲ್ಲ. ಇನ್ನು ಒಳಮೀಸಲಾತಿಯನ್ನು ಜಾರಿ ಮಾಡಲು ಹೇಗೆ ಸಾಧ್ಯ ಎಂದು ರವಿವರ್ಮ ಕುಮಾರ್ ಪ್ರಶ್ನಿಸಿದರು. 

‘ಮುಸ್ಲಿಮರ ಮೀಸಲಾತಿಯನ್ನು ರದ್ದುಪಡಿಸಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಆಧಾರದ ಮೇಲೆ ಮೀಸಲಾತಿಯನ್ನು ನೀಡುವುದಿಲ್ಲ ಎಂದು ತಿಳಿಸುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಕಿತ್ತು ಹಾಕಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಕ್ರೈಸ್ತರಿಗೆ, ಜೈನ್ಯರಿಗೆ ಮೀಸಲಾತಿಯನ್ನು ಕೊಟ್ಟಿದ್ದಾರೆ’ ಎಂದು ಅವರು ಹೇಳಿದರು. 

ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಬಿಎ, ಎಂಎ ಓದುತ್ತಿರುವ ದಲಿತ ವಿದ್ಯಾರ್ಥಿಗಳು ಮಾತ್ರ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು ಚುಳುವಳಿಗೆ ಬರುತ್ತಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಎಲ್ಲ ವಿದ್ಯಾರ್ಥಿಗಳು ಹೋರಾಟದ ಮನೋಭಾವ ರೂಢಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಎನ್.ವೆಂಕಟೇಶ್, ಜಿಗಣಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Similar News