ಕೇಂದ್ರ ಸರಕಾರದ ಕೈಯಲ್ಲಿ ದೇಶದ ಕ್ರೀಡೆಯ ಮಾನ!

Update: 2023-05-03 04:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

‘ಒಲಿಂಪಿಕ್‌ನಲ್ಲಿ ಭಾರತದ ಕಳಪೆ ಸಾಧನೆ’ಗಳ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಿರುತ್ತವೆ. ಭಾರತದ ಕ್ರೀಡಾ ವಲಯಗಳನ್ನು ಆವರಿಸಿಕೊಂಡಿರುವ ಭ್ರಷ್ಟಾಚಾರ, ತಾರತಮ್ಯ ನೀತಿ ಮೊದಲಾದವುಗಳ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿರುತ್ತವೆ. ಕ್ರಿಕೆಟ್‌ನ ಅತಿ ವೈಭವೀಕರಣ, ಸರಕಾರದ ಮಲತಾಯಿ ಧೋರಣೆ ಇವೆಲ್ಲದರ ನಡುವೆಯೂ ಅಪರೂಪಕ್ಕೆ ಮಿಂಚು ಹೊಡೆದಂತೆ ಒಲಿಂಪಿಕ್‌ನಲ್ಲಿ ಒಬ್ಬಿಬ್ಬರು ಚಿನ್ನದ ಪದಕಗಳನ್ನು ಪಡೆದು ಸುದ್ದಿಯಾಗುತ್ತಾರೆ. ಕಾಮನ್ ವೆಲ್ತ್ ಗೇಮ್ಸ್, ಏಶ್ಯನ್ ಗೇಮ್ಸ್, ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಶಿಪ್‌ಗಳಲ್ಲಿ ಭಾರತದ ಕಾರ್ಗತ್ತಲಿಗೆ ಮಿಂಚಿನ ಬೆಳಕಾದವರಲ್ಲಿ  ಭಾರತದ ಕುಸ್ತಿ ಕ್ರೀಡಾಪಟುಗಳು ಮುಖ್ಯರು. ಕುಸ್ತಿ ಭಾರತದ ಸಾಂಪ್ರದಾಯಿಕ ಕ್ರೀಡೆ ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ ಮಾತ್ರವಲ್ಲ, ಪುರುಷರ ಕ್ರೀಡೆ ಎನ್ನುವ ಪೂರ್ವಾಗ್ರಹಕ್ಕೂ ಈಡಾಗುತ್ತಾ ಬಂದಿದೆ. ಈ ಪುರುಷ ಪ್ರಾಬಲ್ಯವನ್ನು ಮುರಿದು, ಭಾರತದಲ್ಲಿ ಹಲವು ಮಹಿಳೆಯರು ಕುಸ್ತಿಯಲ್ಲಿ ಮಿಂಚಿದ್ದಾರೆ ಮತ್ತು ಮಿಂಚುತ್ತಿದ್ದಾರೆ. ಇವರಿಗೆ ಸರ್ವ ರೀತಿಯಲ್ಲಿ ನೆರವಾಗಿ ಅವರನ್ನು ಬೆಳೆಸುವುದು ಸರಕಾರದ ಹೊಣೆಗಾರಿಕೆೆ. ಆದರೆ ದುರದೃಷ್ಟವಶಾತ್, ಬೆಳೆಸುವುದಿರಲಿ, ಸರಕಾರದ ನೇತೃತ್ವದಲ್ಲೇ ಈ ಪ್ರತಿಭೆಗಳನ್ನು ಚಿವುಟುವ ಕೆಲಸ ನಡೆಯುತ್ತಿದೆ. ತಮಗೆ ಬೇಕಾದ ಸವಲತ್ತಿಗೆ ಸರಕಾರವನ್ನು ಆಗ್ರಹಿಸುವ ಬದಲು, ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ವಿರೋಧಿಸಿ ಪ್ರತಿಭಟಿಸುವ ಮೂಲಕ ಮಹಿಳಾ ಕುಸ್ತಿ ಪಟುಗಳು, ಸುದ್ದಿಯಲ್ಲಿದ್ದಾರೆ. ಈ ಮಹಿಳಾ ಕುಸ್ತಿ ಪಟುಗಳ ಕೂಗಿಗೆ ತಕ್ಷಣ ಸ್ಪಂದಿಸಬೇಕಾದ ಸರಕಾರ, ಅವರ ಪ್ರತಿಭಟನೆಯನ್ನೇ ದಮನಿಸುವ ಪ್ರಯತ್ನದಲ್ಲಿದೆ. ಭಾರತ ಒಲಿಂಪಿಕ್‌ನಲ್ಲಿ ಯಾಕೆ ಕಳಪೆ ಸಾಧನೆ ಮಾಡುತ್ತಿದೆ ಎನ್ನುವುದಕ್ಕೆ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನಾ ನಿರತ ಮಹಿಳಾ ಕುಸ್ತಿ ಪಟುಗಳು ಉತ್ತರ ಹೇಳುತ್ತಿದ್ದಾರೆ.

ಈ ದೇಶದಲ್ಲಿ ಮಹಿಳೆಯರು ಕುಸ್ತಿ ಪಟುಗಳಾಗುವುದೇ ಬಹುದೊಡ್ಡ ಸಾಧನೆ. ಪುರುಷರಿಗಷ್ಟೇ ಸೀಮಿತವಾಗಿರುವ ಈ ಕುಸ್ತಿಯಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿ ಎಲ್ಲ ಪುರುಷ ಪ್ರಧಾನ ಪೊಳ್ಳು ನಂಬಿಕೆಗಳನ್ನು ಮುರಿದು, ಅಂತರ್‌ರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿ ಪಟುವಾಗುವುದೆಂದರೆ ಸಣ್ಣ ವಿಷಯವಲ್ಲ. ಮಹಿಳೆಯರ ‘ಶಕ್ತಿ’ಗೆ ಈ ಕುಸ್ತಿ ಪಟುಗಳು ರೂಪಕವಾಗಿದ್ದಾರೆ. ಇಂತಹ ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಿ ಅವರಿಗೆ ಸರಕಾರ ನೀಡುವ ಸಕಲ ಬೆಂಬಲವೂ ಪರೋಕ್ಷವಾಗಿ ಈ ದೇಶದ ಮಹಿಳೆಯ ಸಬಲೀಕರಣವಾಗಿದೆ. ಆದರೆ ದುರದೃಷ್ಟವಶಾತ್ ಸರಕಾರವಿಂದು ಅವರಿಗೆ ಬೆಂಬಲವನ್ನು ನೀಡುವುದಿರಲಿ, ಬದಲಿಗೆ ಅವರಿಗೆ ಲೈಂಗಿಕ ಕಿರುಕುಳ ನೀಡಿ ಮಾನಸಿಕ ಮತ್ತು ದೈಹಿಕವಾಗಿ ಅವರ ಮೇಲೆ ದೌರ್ಜನ್ಯ ನಡೆಸಿ ಅವರನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ. ತಮ್ಮ ಮೇಲೆ ಸರಕಾರದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳಾ ಕುಸ್ತಿ ಪಟುಗಳು ಬೀದಿಯಲ್ಲಿ ನಿಂತು ಚೀರುತ್ತಿದ್ದರೆ, ಸರಕಾರ ಆ ಆರೋಪಿಯ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ಸಂತ್ರಸ್ತರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ನಡೆಸುತ್ತಿದೆ. ಇಷ್ಟಕ್ಕೂ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಹೊತ್ತಿರುವುದು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ. ಕುಸ್ತಿಪಟುಗಳಿಗೆ ಮಾರ್ಗದರ್ಶನ ನೀಡಬೇಕಾದವನೇ ಇಂದು ಅವರ ಮೇಲೆ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವಾಗ ಸರಕಾರವೇಕೆ ಆತನನ್ನು ವಜಾಗೊಳಿಸಲು ಹಿಂದೆ ಮುಂದೆ ನೋಡುತ್ತಿದೆ? ಎನ್ನುವ ಪ್ರಶ್ನೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎದ್ದಿದೆ.

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ಪದಾಧಿಕಾರಿಗಳು ಒಂದು ದಶಕದ ಅವಧಿಯಲ್ಲಿ ಭಾರೀ ಸಂಖ್ಯೆಯ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ ಎಂದು ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯ ಮುಂತಾದ ದೇಶದ ಪ್ರಸಿದ್ಧ ಕುಸ್ತಿಪಟುಗಳ ಗುಂಪೊಂದು ಆರೋಪಿಸಿದೆ. ಈ ಬಗ್ಗೆ ಪ್ರಧಾನಿಯ ಬಳಿ ದೂರನ್ನು ನೀಡಲಾಗಿದೆಯಾದರೂ, ಇನ್ನೂ ಆರೋಪಿಯ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಈಗ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯ ಲೈಂಗಿಕ ಕಿರುಳು ನೀಡಿದ್ದಾರೆನ್ನಲಾದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಯ ನೇತೃತ್ವ ವಹಿಸಿ ಬೀದಿಗಿಳಿದಿದ್ದಾರೆ. ಒಂದಲ್ಲ, ಎರಡು ಬಾರಿ. ಭಾರತೀಯ ಕುಸ್ತಿ ಫೆಡರೇಶನ್‌ನ ಕೊಳೆತು ಹೋದ ವ್ಯವಸ್ಥೆಯನ್ನು ಅವರು ಜಗತ್ತಿನ ಎದುರಿಗೆ ಬಿಚ್ಚಿಟ್ಟಿದ್ದಾರೆ. ಈ ವಾರವೂ, ಸುದ್ದಿಗಾರರೊಂದಿಗೆ ಮಾತನಾಡಿದ ಫೋಗಟ್, ‘‘ಟೋಕಿಯೊ ಒಲಿಂಪಿಕ್ಸ್ ಬಳಿಕ ಪ್ರಧಾನಿ ನನಗೆ ಫೋನ್ ಮಾಡಿದ್ದರು, ನಾನು ಕುಟುಂಬ ಸದಸ್ಯರೊಂದಿಗೆ ಅವರನ್ನು ನೋಡಲು ಹೋಗಿದ್ದೆ. ಬ್ರಿಜ್ ಭೂಷಣ್ ಬಗ್ಗೆ, ನಾನು ಪ್ರಧಾನಿಗೆ ದೂರು ನೀಡಿದ್ದೇನೆ’’ ಎಂದು ತಿಳಿಸಿದ್ದರು.

ಸಾಮಾನ್ಯವಾಗಿ ಮಹಿಳೆಯರನ್ನು ಹೇಗೆ ಕಾಣಲಾಗುತ್ತಿದೆ ಎಂಬ ಬಗ್ಗೆ ಪ್ರಧಾನಿ ಸಾರ್ವಜನಿಕವಾಗಿ ಅತ್ಯಂತ ಕಳವಳವನ್ನು ವ್ಯಕ್ತಪಡಿಸುತ್ತಾರೆ. ೨೦೨೨ ಆಗಸ್ಟ್ ೧೫ರಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘‘ನನ್ನೊಳಗಿರುವ ನೋವನ್ನು ನಾನು ಯಾರಲ್ಲಿ ಹೇಳಿಕೊಳ್ಳಲಿ? ನಮ್ಮ ದೈನಂದಿನ ಸಂಭಾಷಣೆಯಲ್ಲಿ, ನಮ್ಮ ವರ್ತನೆಯಲ್ಲಿ, ನಮ್ಮ ಪದಗಳಲ್ಲಿ ನಾವು ಮಹಿಳೆಯರನ್ನು ಅವಮಾನಿಸುತ್ತೇವೆ. ಸ್ವಭಾವವನ್ನು ಬದಲಾಯಿಸಿಕೊಳ್ಳುವ ಮೂಲಕ, ಸಂಸ್ಕಾರದ ಮೂಲಕ, ಮಹಿಳೆಯರನ್ನು ಅವಮಾನಿಸುವ ಇಂಥ ಮಾತುಗಳಿಂದ ದೂರವಿರುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗದೇ?’’ ಎಂದು ಭಾವುಕವಾಗಿ ಹೇಳಿದ್ದರು. ಇದೀಗ ಈ ದೇಶದ ಹೆಮ್ಮೆಯ ಕ್ರೀಡಾ ಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಪ್ರಧಾನಿಗೆ ತಿಳಿಸಿದ ಬಳಿಕವೂ ಯಾಕೆ ನ್ಯಾಯಕ್ಕಾಗಿ ಬೀದಿಗೆ ಬರಬೇಕಾಯಿತು? ಈ ಕ್ರೀಡಾಳುಗಳ ನೋವು ಯಾಕೆ ಪ್ರಧಾನಿಗೆ ಅರ್ಥವಾಗಲಿಲ್ಲ? ಎಂದು ದೇಶವೇ ಒಂದಾಗಿ ಕೇಳುವಂತಾಗಿದೆ.

ದಿಲ್ಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂಬುದಾಗಿ ಅರ್ಜಿದಾರರು ಸುರ್ಪ್ರೀಕೋರ್ಟ್‌ನ್ನು ಕೋರಿದ್ದಾರೆ. ಆದರೆ, ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ಇದನ್ನು ವಿರೋಧಿಸಿದ್ದಾರೆ. ಭಾರತೀಯ ಕ್ರೀಡಾ ಇತಿಹಾಸದಲ್ಲೇ, ಇಷ್ಟೊಂದು ಅಗಾಧ ಪ್ರಮಾಣದ ಲೈಂಗಿಕ ಕಿರುಕುಳ ಆರೋಪವೊಂದು ಈವರೆಗೆ ಕೇಳಿಬಂದಿಲ್ಲ. ಸರಕಾರವೇ ಆರೋಪಿಗಳ ಪರವಾಗಿ ವಕಾಲತು ವಹಿಸುತ್ತಿರುವುದು ಕೂಡ ಈ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇರಬೇಕು. ಕ್ರೀಡಾಳುಗಳ ಮೇಲಿನ ಲೈಂಗಿಕ ದೌರ್ಜನ್ಯಗಳ ಆರೋಪಗಳನ್ನು ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ಸಂಘಟನೆಗಳು ಮಾಡುತ್ತಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಆದರೆ ಈ ಆರೋಪಗಳನ್ನು ಮಾಡುತ್ತಿರುವುದು ಸ್ವತಃ ಮಹಿಳಾ ಕುಸ್ತಿಪಟುಗಳೇ ಆಗಿದ್ದಾರೆ. ಅವರು ತಮ್ಮ ಕ್ರೀಡಾ ಭವಿಷ್ಯವನ್ನೇ ಒತ್ತೆಯಾಗಿಟ್ಟು ಸರಕಾರದ ವಿರುದ್ಧ ಬೀದಿಗಿಳಿಯಬೇಕಾದರೆ ಅವರಿಗಾಗಿರುವ ನೋವಾದರೂ ಎಂತಹದಿರಬೇಕು? ದೇಶದ ಕ್ರೀಡೆಯ ಹಿರಿಮೆಯನ್ನು ಉಳಿಸಬೇಕೋ ಅಥವಾ ತನ್ನ ಸಂಸದನನ್ನು ಉಳಿಸಬೇಕೋ ಎನ್ನುವುದನ್ನು ಸರಕಾರ ನಿರ್ಧರಿಸಬೇಕಾದ ಸಮಯ ಇದೀಗ ಬಂದಿದೆ.

ಒಂದು ರೀತಿಯಲ್ಲಿ ಇದು ಬರಿಯ ಕ್ರೀಡಾಳುಗಳಿಗಷ್ಟೇ ಅಲ್ಲ, ಮಹಿಳೆಯರಿಗೆ ಸಂಬಂಧಿಸಿದ ವಿಷಯವಾಗಿದೆ. ಮಹಿಳೆಯರ ಮಾನ, ಘನತೆಯ ಬಗ್ಗೆ ಮಾತನಾಡುವ ‘ಸಂಸ್ಕೃತಿಯ ಗುತ್ತಿಗೆ’ ತೆಗೆದುಕೊಂಡ ಬಿಜೆಪಿ ಸರಕಾರವೇ ದೇಶದ ಮಹಿಳೆಯರ ವಿಷಯದಲ್ಲಿ ಕಟಕಟೆಯಲ್ಲಿ ನಿಂತಿದೆ. ಈ ದೇಶದ ಮಹಿಳೆಯರ ಘನತೆಗಿಂತ ತನ್ನ ಪಕ್ಷದ ಸಂಸದನನ್ನು ಉಳಿಸುವುದೇ ಸರಕಾರಕ್ಕೆ ಮುಖ್ಯವಾಗಿದ್ದರೆ ಅದು ಈ ದೇಶದ ದುರಂತವೇ ಸರಿ. ಈ ದೇಶದ ಮಹಿಳೆಯರ ಘನತೆ, ಕ್ರೀಡೆಯ ಭವಿಷ್ಯ ಸರಕಾರದ ಕೈಯಲ್ಲಿದೆ. ಸರಕಾರ ತಕ್ಷಣ ಆರೋಪಿಯ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಆ ಘನತೆ, ಹಿರಿಮೆಯನ್ನು ಕಾಪಾಡಬೇಕಾಗಿದೆ.

Similar News