×
Ad

ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಸುಳ್ಳು ಹಬ್ಬಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಿ: ರಮಾನಾಥ ರೈ

Update: 2023-05-01 21:57 IST

ಬಂಟ್ವಾಳ: ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ರಾಜಕಾರಣ ಮಾಡುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ರಮಾನಾಥ ರೈ ಕರೆ ನೀಡಿದರು.

ಬಿ.ಸಿ.ರೋಡ್ ಪರ್ಲಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಕಳೆದ ಐದು ವರ್ಷದಲ್ಲಿ ಬಂಟ್ವಾಳ ಶಾಂತವಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಬಂಟ್ವಾಳದ ನೆಮ್ಮದಿ ಕೆಡಿಸಿದವರೇ ಬಿಜೆಪಿಯವರು, ನಮ್ಮ ಅವಧಿಯಲ್ಲಿ ಚುನಾವಣೆಗೂ ಆರು ತಿಂಗಳು ಇರುವಾಗಲೇ ಗಲಭೆಗಳ ಸಂಚು ರೂಪಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದರು. ಕೊಲೆ ಪ್ರಕರಣವೊಂದನ್ನು ಕಾಂಗ್ರೆಸ್ ನಾಯಕರ ತಲೆಗೆ ಕಟ್ಟಲು ನೋಡಿದ್ದರು. ಆದರೆ ನಾಲ್ಕೇ ದಿನದಲ್ಲಿ ಆರೋಪಿಗಳು ಪತ್ತೆಯಾದಾಗ  ಇವರು ನಿಜ ಬಣ್ಣ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದರು.

ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿರುವ ಇವರಿಗೆ ಮಾತನಾಡಲು ವಿಷಯಗಳು ಸಿಗುತ್ತಿಲ್ಲ. ಅದಕ್ಕೆ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ನನ್ನ ನಾಮಪತ್ರ ಸಲ್ಲಿಕೆಗೆ ಮಂಜೇಶ್ವರದ ಶಾಸಕ ಆಗಮಿಸಿದ್ದಕ್ಕೆ ಬೇರೆ ಬಣ್ಣ ಕಟ್ಟಲು ನೋಡುತ್ತಿದ್ದಾರೆ. ಮಂಜೇಶ್ವರದ ಶಾಸಕ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಶಾಸಕರಾಗಿದ್ದು, ನನ್ನ ಮೇಲಿನ ಅಭಿಮಾನದಿಂದ ನಾಮಪತ್ರ ಸಲ್ಲಿಕೆಗೆ ಶುಭಕೋರಲು ಬಂದಿದ್ದರು. ಆದರೆ, ಬಿಜೆಪಿಗರು ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸಿ, ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಜನತೆ ಬಿಜೆಪಿಯ ಬಂಡವಾಳವನ್ನು ಅರಿತಿದ್ದು, ವಾಮಮಾರ್ಗದಿಂದ ಅಧಿಕಾರ ಹಿಡಿಯಬಹುದು ಎಂಬ ಇವರ ಕನಸು ನುಚ್ಚುನೂರಾಗಲಿದೆ ಎಂದು ರೈ ಭವಿಷ್ಯ ನುಡಿದರು.

ಭ್ರಷ್ಟ ಬಿಜೆಪಿ ತೊಲಗಿಸಿ : ಅಶ್ವನಿ ಕುಮಾರ್ ರೈ

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಮುಖಂಡ, ನ್ಯಾಯವಾದಿ ಅಶ್ವನಿ ಕುಮಾರ್ ರೈ  ಬಿಜೆಪಿ ಆಡಳಿತದಲ್ಲಿ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದ್ದ ಬಗ್ಗೆ ಗುತ್ತಿಗೆದಾರರು ಆಪಾದಿಸಿದ್ದುದನ್ನು ನಾವು ಕೇಳಿದ್ದೇವೆ. ಮುಖ್ಯಮಂತ್ರಿ ಕುರ್ಚಿ ಕೂಡ ಮಾರಾಟಕ್ಕಿದೆ ಎಂಬರ್ಥದಲ್ಲಿ ಸ್ವತಃ ಬಿಜೆಪಿ ಹಿರಿಯ ನಾಯಕರೇ ಆಪಾದಿಸಿದ್ದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಂಟ್ವಾಳದ ತಾಲೂಕು ಕಚೇರಿ ಭ್ರಷ್ಟಾಚಾರ ಮುಕ್ತವಾಗಿತ್ತು. ಇವತ್ತು ತಾಲೂಕು ಕಚೇರಿ ವರೆಗೂ ಭ್ರಷ್ಟಾಚಾರ ವ್ಯಾಪಿಸಿದೆ. ಆದರೆ, ಬಿಜೆಪಿ ಅವಧಿಯಲ್ಲಿ ಲೋಕಾಯುಕ್ತ ದಾಳಿ ನಡೆಯಿತು. ಈ ವೇಳೆ ಕಚೇರಿಯಲ್ಲಿ ಕೆಲವು ಕಡತಗಳು ನಾಪತ್ತೆಯಾಗಿದ್ದ ಬಗ್ಗೆ ಕೇಳಿಬಂದಿದ್ದವು. ಹೀಗೆ, ವಿವಿಧ ಹಂತದಲ್ಲಿ ಭ್ರಷ್ಟಾಚಾರ ಮಿತಿ ಮೀರಿರುವುದರಿಂದ ಭ್ರಷ್ಟ ಬಿಜೆಪಿಯನ್ನು ತೊಲಗಿಸಬೇಕು  ಎಂದರು.

ರಮಾನಾಥ ರೈ ಯವರು ನಿಸ್ವಾರ್ಥ ಜನಸೇವಕ. ಅವರು ಸಚಿವರಾಗಿದ್ದಾಗಲೂ ಅಧಿವೇಶನವಿದ್ದರೆ ಮಾತ್ರ ಬೆಂಗಳೂರಿನಲ್ಲಿರುತ್ತಿದ್ದರು. ವಾರಾಂತ್ಯದಲ್ಲಿ ಊರಿಗೆ ಬಂದು ತಮ್ಮ ಕ್ಷೇತ್ರದ ಜನರ ನಡುವೆ ಇರುತ್ತಿದ್ದರು. ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ, ಬಡವರ ಸೇವೆಗಾಗಿ ಐಶಾರಾಮಿ ಜೀವನವನ್ನು ತ್ಯಜಿಸಿದವರು. ಶಾಸಕ, ಸಚಿವನಾದರೂ ಬೆಂಗಳೂರು, ಮಂಗಳೂರು ಅಥವಾ ಬಿ.ಸಿ.ರೋಡಿನಲ್ಲಿ ಒಂದೇ ಒಂದು ಮನೆ ಕಟ್ಟಿಲ್ಲ. ತನ್ನ ಹಿರಿಯರು ನೀಡಿದ ಮನೆಯಲ್ಲಿ, ಮನೆಗೆ ಬಂದವರನ್ನೆಲ್ಲಾ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕನಿಗೆ ಮತ್ತೊಮ್ಮೆ ಅಧಿಕಾರ ನೀಡುವ ಮೂಲಕ ಅವರ ಕೊನೆಯ ಚುನಾವಣೆಯಲ್ಲಿ ಗೌರವಪೂರ್ಣ ಫಲಿತಾಂಶ ನೀಡುವುದು ನಮ್ಮೆಲ್ಲರ ಹೊಣೆ ಎಂದು ಅಶ್ವನಿ ಕುಮಾರ್ ರೈ ತಿಳಿಸಿದರು.

ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಮುಖರುಗಳಾದ ಬಿ.ಎಚ್. ಖಾದರ್, ಕೆ.ಕೆ.ಶಾಹುಲ್ ಹಮೀದ್, ಪದ್ಮಶೇಖರ ಜೈನ್, ಲುಕ್ಮಾನ್ ಬಂಟ್ವಾಳ, ಅಬ್ಬಾಸ್ ಅಲಿ, ಚಂದ್ರಶೇಖರ ಪೂಜಾರಿ, ಪ್ರವೀಣ್ ಬಂಟ್ವಾಳ್, ಪಿ.ಎ. ರಹೀಂ, ಶಬೀರ್ ಸಿದ್ದಕಟ್ಟೆ, ಅರ್ಶದ್ ಸರವು, ಇಬ್ರಾಹೀಂ ಕೊಡಂಗೆ, ಫಕ್ರುದ್ದೀನ್, ಬಿ.ಮೋಹನ್, ಮಹಮ್ಮದ್ ನಂದರಬೆಟ್ಟು, ಉಮೇಶ್ ಸಪಲ್ಯ, ಬಿ.ಎಸ್. ಅಬ್ದುಲ್ ಹಮೀದ್, ಮುಹಮ್ಮದ್ ಸಾಗರ ಮತ್ತಿತರರು ಉಪಸ್ಥಿತರಿದ್ದರು.

Similar News