ಆ್ಯಂಬುಲೆನ್ಸ್ ಹೆಸರಿನಲ್ಲಿ 26 ಕೋಟಿ ರೂ.ಅವ್ಯವಹಾರ ಆರೋಪ: ಯಡಿಯೂರಪ್ಪ ಸೇರಿ 28 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು

''ಬಿಬಿಎಂಪಿ ವ್ಯಾಪ್ತಿಯಲ್ಲೇ ಕೋವಿಡ್ ನಿರ್ವಹಣೆಗೆ 821 ಕೋಟಿ ರೂ.ಖರ್ಚು''

Update: 2023-05-03 14:51 GMT

ಬೆಂಗಳೂರು, ಮೇ 3: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆಗಾಗಿ ಸುಮಾರು 821 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ಅದರಲ್ಲಿ 26 ಕೋಟಿ ರೂ.ಗಳ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಟಿ.ಜೆ. ಅವರು ಆರೋಪಿಸಿದ್ದಾರೆ.

ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಸೇರಿದಂತೆ 28 ಮಂದಿಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವ ಅವರು, ಎಫ್‍ಐಆರ್ ಅನ್ನು ದಾಖಲಿಸುವಂತೆ ಲೋಕಾಯುಕ್ತ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಕೋವಿಡ್ ನಿರ್ವಹಣೆಗಾಗಿ ಆ್ಯಂಬುಲೆನ್ಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಆದರೆ ಆ್ಯಂಬುಲೆನ್ಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಲ್‍ಗಳನ್ನು ಮಾತ್ರ ಮಾಡಿಕೊಳ್ಳಲಾಗಿದೆ, ಹೊರತು, ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಗಳನ್ನು ಬಳಕೆ ಮಾಡಿಕೊಂಡಿಲ್ಲ. ಕೋವಿಡ್ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಹಾಗೂ ತುರ್ತು ಸೇವೆ ಒದಗಿಸುವ ವಾಹನಗಳಿಗಾಗಿ ಸುಮಾರು 125 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆ್ಯಂಬುಲೆನ್ಸ್ ಗಳ ಹೆಸರಿನಲ್ಲಿ ಸುಮಾರು 22 ಕೋಟಿ ರೂ.ಗಳ ವೆಚ್ಚದಲ್ಲಿ ಮ್ಯಾಕ್ಸಿ ಕ್ಯಾಬ್‍ಗಳನ್ನು ಹಾಗೂ ಸುಮಾರು 4 ಕೋಟಿ ರೂ.ಗಳ ವೆಚ್ಚದಲ್ಲಿ ವಾಣಿಜ್ಯ ವಾಹನಗಳನ್ನು ಪೂರೈಕೆ ಮಾಡಲಾಗಿದೆ ಎಂದು ಸುಳ್ಳು ಬಿಲ್‍ಗಳನ್ನು ಮಾಡಿಕೊಳ್ಳಲಾಗಿದೆ. ಹಾಗಾಗಿ ಆ್ಯಂಬುಲೆನ್ಸ್ ಗಾಗಿ ಬಳಕೆ ಮಾಡಿದ 125 ಕೋಟಿ ರೂ.ಗಳಲ್ಲಿ 26 ಕೋಟಿ ರೂ.ಗಳ ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.

2021ರ ಮಾರ್ಚ್ ಹಾಗೂ 2022 ಅಕ್ಟೋಬರ್ ನಡುವೆ ಕೋವಿಡ್ ಅಲೆ ಹೆಚ್ಚಾಗಿ ಈ ಅಕ್ರಮಗಳು ನಡೆದಿವೆ. ಇಡೀ ರಾಜ್ಯದ ಜನತೆ ಕೋವಿಡ್ ಬಿಕ್ಕಟ್ಟನಿಂದ ನರಳುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಬಿಎಂಪಿಯ ಎಂಟು ವಲಯಕ್ಕೆ ನೇಮಿಸಿದ ಉಸ್ತುವಾರಿ ಮಂತ್ರಿಗಳು ಹಾಗೂ ಅವರ ಅಧೀನದಲ್ಲಿ ಬರುವ ಐಎಎಸ್ ಅಧಿಕಾರಿಗಳು ಸೇರಿ 28 ಮಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಅವರು ದೂರಿದ್ದಾರೆ. 

Similar News