ಮಾನಹಾನಿಕರ ವೀಡಿಯೊ ಪ್ರಸಾರ ಮಾಡುವ ಬೆದರಿಕೆ ಆರೋಪ: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಕದ್ರಿ ಠಾಣೆಗೆ ದೂರು
ಮಂಗಳೂರು: ತನ್ನ ವಿರುದ್ಧ ಮಾನಹಾನಿಕರ ವೀಡಿಯೊ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಮಂಗಳೂರು ಪೂರ್ವ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಶಿವಶಂಕರ್ ಶೆಟ್ಟಿ ಮತ್ತು ವಿಜೆ ಅಜಯ್ ಅಂಚನ್ ಮಾನಹಾನಿಕರ ವರದಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿ 25 ಲ.ರೂ. ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣಕ್ಕೆ ಯೂ ಟ್ಯೂಬ್‌ನಲ್ಲಿ ಮಾನಹಾನಿಕರ ವೀಡಿಯೊ ಪ್ರಸಾರ ಮಾಡಿ ಬೇಡಿಕೆ ಈಡೇರಿಸದಿದ್ದಲ್ಲಿ ಇನ್ನಷ್ಟು ವೀಡಿಯೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಎ.28ರಂದು ವಿಜೆ ಅಜಯ್ ಅಂಚನ್ ಮಾಲಕತ್ವದ ಯೂ ಟ್ಯೂಬ್ ಚಾನೆಲ್‌ನಲ್ಲಿ ಒಂದು ವೀಡಿಯೋವನ್ನು ಹರಿಯಬಿಟ್ಟಿದ್ದು ಈ ವೀಡಿಯೋದಲ್ಲಿ ಅಜಯ್ ಅಂಚನ್ ಶಿವಶಂಕರ್ ಶೆಟ್ಟಿ ಅವರನ್ನು ಸಂದರ್ಶಿಸುವ ರೀತಿಯಲ್ಲಿ ತೋರಿಸಲಾಗಿದೆ. ಅದರಲ್ಲಿ ಅಶೋಕ್ ರೈ ಜನರಿಗೆ ಮೋಸ ಮಾಡಿದ್ದಾರೆ ಎಂಬುದಾಗಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಪ್ರಕರಣ ದಾಖಲಾಗಿದೆ.