ಮ.ನ.ಪಾ ವ್ಯಾಪ್ತಿಯಲ್ಲಿ ಪ್ರತಿ ದಿನ 4,89,000 ಲೀ. ಕುಡಿಯುವ ನೀರು ಟ್ಯಾಂಕರ್ ಮೂಲಕ ಪೂರೈಕೆ
ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಪ್ರತೀ ನಿತ್ಯ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ ನಿರಂತರ ನೀರು ಪೂರೈಕೆ ಸಾಧ್ಯವಾಗದಿರುವ ಕಡೆ 4,89,000 ಲೀ ಕುಡಿಯುವ ನೀರನ್ನು 11 ಟ್ಯಾಂಕರ್‌ಗಳ ಮೂಲಕ 88 ಬಾರಿ (ಟ್ರಿಪ್ ಗಳಲ್ಲಿ) ಸರಬರಾಜು ಮಾಡಲಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂದೂರ್‌ವೆಲ್ ಪಂಪ್ ಹೌಸ್‌ನಲ್ಲಿ 3000 ಲೀ. ಸಾಮರ್ಥ್ಯ ದ 3 ಟ್ಯಾಂಕರ್‌ಗಳು, ಕರಾವಳಿ ಪಂಪ್ ಹೌಸ್‌ನಲ್ಲಿ 6000 ಲೀ.ಸಾಮರ್ಥ್ಯ ದ 3 ಟ್ಯಾಂಕರ್‌ಗಳು, ಕುಳಾಯಿ ಪಂಪ್ ಹೌಸ್‌ನಲ್ಲಿ 6000 ಲೀ.ನ 3 ಟ್ಯಾಂಕರ್‌ಗಳು ಹಾಗೂ ಮೇರಿಹಿಲ್ ಪಂಪ್ ಹೌಸ್‌ನಲ್ಲಿ 6000 ಲೀ.ನ 2 ಟ್ಯಾಂಕರ್‌ಗಳಿಂದ 88 ಟ್ರಿಪ್ ಗಳ ಮೂಲಕ ತಡರಾತ್ರಿ 1 ಗಂಟೆಯವರೆಗೂ ನೀರಿನ ಪೂರೈಕೆಯ ಕೆಲಸ ಕಾರ್ಯಗಳು ಮನಪಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಮೇ 4ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಮಹಾನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಸುರತ್ಕಲ್ ಪಶ್ಚಿಮ ಹಾಗೂ ಪೂರ್ವ, ಕಾಟಿಪಳ್ಳ ಪೂರ್ವ ಹಾಗೂ ಉತ್ತರ, ಕೃಷ್ಣಪುರ, ಇಡ್ಯಾ ಪೂರ್ವ ಹಾಗೂ ಪಶ್ಚಿಮ, ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ, ಪಣಂಬೂರು, ಬಂಗ್ರ ಕೂಳೂರು, ದೇರೆಬೈಲ್, ಕಾವೂರು, ಕುಂಜತ್‌ಬೈಲ್, ಮರಕಡ, ಪಚ್ಚನಾಡಿ, ತಿರುವೈಲು, ಸುಭಾಷ್‌ನಗರ, ಕಂದುಕ, ದಂಬೆಲ್, ಬಜಾಲ್, ಜಲ್ಲಿಗುಡ್ಡೆ, ವೆನ್‌ಲಾಕ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ, ಬೊಕ್ಕಪಟ್ನ, ಬಂದರು ಹಾಗೂ ಮತ್ತಿತರ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮನಪಾ ಅಧಿಕಾರಿಗಳು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಜನರು ತಿಂಗಳ ಹಿಂದೆಯೇ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನದಿ ಮೂಲಗಳಲ್ಲೇ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
*ಮಂಗಳೂರು ನಗರ ಹಾಗೂ ಸುತ್ತಾಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನಿರಂತರ ವಾಗಿ ನೀರು ಕಡಿಮೆಯಾಗುತ್ತಿದೆ. ತುಂಬೆ ಡ್ಯಾಂನಲ್ಲಿ ಕೇವಲ 20 ದಿನಕ್ಕೆ ಮಂಗಳೂರು ನಗರಕ್ಕೆ ಪೂರೈಕೆ ಮಾಡುವಷ್ಟು ನೀರಿನ ಸಂಗ್ರಹವಿದೆ. ಪ್ರತಿದಿನ ಪಂಪಿಂಗ್ ಮಾಡುತ್ತಿರುವ ವೇಳೆ 8 ಸಂಟಿಮೀಟರ್‌ನಷ್ಟು ನೀರು ಇಳಿಕೆಯಾಗುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆ ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿರುವ ಅಡ್ಯಾರ್ ಹರೇಕಳ ಬ್ಯಾರೇಜ್‌ನ ಹಿನ್ನೀರಿನಿಂದ ಸುಮಾರು 10ದಿನಗಳಿಂದ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದೆ.ಪಂಪ್ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ.
ತುಂಬೆ ಅಣೆಕಟ್ಟು ತುಂಬೆ ಅಣೆಕಟ್ಟಿನಲ್ಲಿ ಒಂದುವಾರದ ಹಿಂದೆ ನೀರಿನ ಮಟ್ಟ 4.48 ಮೀಟರ್‌ಗೆ ಇಳಿಕೆಯಾಗಿದ್ದು, ಬಳಿಕ 4 ಮೀಟ ರ್ ಗೆ ಕೆಳಗೆ ಇಳಿದಿದ್ದು ಇದೀಗ ಕಿಂಡಿ ಅಣೆಕಟ್ಟಿನ ಕೆಳಗಿನ ಪ್ರದೇಶದಿಂದ ಅಡ್ಯಾರ್ ಹರೇಕಳ ಡ್ಯಾಂ ವರಿಗಿನ ನೀರನ್ನು ಪಂಪ್ ಮೂಲಕ ಮೇಲೆತ್ತಿ ಡ್ಯಾಂ ನ ನೀರಿನ ಮಟ್ಟ 4.34 ಮೀಟರ್ ವರೆಗೆ ಏರಿಕೆಯಾಗಿದೆ. ಸುಮಾರು 2.5ಮೀಟರ್‌ವರೆಗೆ ಮಂಗ ಳೂರು ನಗರಕ್ಕೆ ಪಂಪಿಂಗ್ ಮಾಡಬಹು ದಾಗಿದೆ.ಇದರಿಂದ ಮಿತ ಬಳಕೆ ಮಾಡಿದರೆ ಕನಿಷ್ಠ 20 ದಿನಗಳಿಗೆ ನೀರು ಪೂರೈಕೆ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.