ದ.ಕ.ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಶೇ.6ರಷ್ಟು ಮತದಾನ ಹೆಚ್ಚಳಕ್ಕೆ ಪ್ರಯತ್ನ: ಡಿಸಿ ರವಿಕುಮಾರ್

"17,81,389 ಮಂದಿ ಮತದಾರರು, 1860 ಮತಗಟ್ಟೆ"

Update: 2023-05-09 15:33 GMT

ಮಂಗಳೂರು: ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ದ.ಕ.ಜಿಲ್ಲೆಯಲ್ಲಿ ಮುಕ್ತ, ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದ್ದು, 1860 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು 17,81,389 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಕಳೆದ ಬಾರಿಗಿಂತ ಶೇ. 6ರಷ್ಟು  ಮತದಾನ ಹೆಚ್ಚಳಕ್ಕೆ ಪ್ರಯತ್ನ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಗರದಲ್ಲಿ 676 ಮತ್ತು ಗ್ರಾಮೀಣ 1184 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 100 ಮಾದರಿ ಮತಗಟ್ಟೆಗಳಾಗಿವೆ ಎಂದು ಹೇಳಿದರು.

ಮಾದರಿ ಮತಗಟ್ಟೆಗಳ ಪೈಕಿ 11 ಯಕ್ಷಗಾನ, 11 ಕಂಬಳ, 8 ಬ್ಲೂ ವೇವ್, 8 ಹೆರಿಟೇಜ್, 8 ಗೋ ಗ್ರೀನ್, 3 ಎಥಿನಿಕ್, 8 ಯುವ, 40 ಸಾಕಿ, 3 ಪಿಡಬ್ಲ್ಯುಡಿ ಮತಗಟ್ಟೆಗಳಾಗಿವೆ.

ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು ಒಬ್ಬ ಅದ್ಯಕ್ಷಾಧಿಕಾರಿ, 3 ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ಗ್ರೂಪ್ ಡಿ ಸಿಬ್ಬಂದಿಯ ನಿಯೋಜಿಸಲಾಗಿದೆ. ಒಟ್ಟು 1860 ಮತಗಟ್ಟೆಗಳಲ್ಲಿ  8,940 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ  ಎಂದು ಮಾಹಿತಿ ನೀಡಿದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಹಿರಿಯ ನಾಗರಿಕರಿಗೆ (80+) , ವಿಶೇಷ ಚೇತನರಿಗೆ, ಕೋವಿಡ್ ಬಾಧಿತರಿಗೆ ಅವರ ಕೋರಿಕೆಯಂತೆ ಚುನಾವಣಾ ಅಂಚೆ ಮತಪತ್ರ ಅಧಿಕಾರಿಗಳ ತಂಡ ಮನೆಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಅದರಂತೆ  12,313 ಮಂದಿ ಮತ ಚಲಾಯಿಸಿದ್ದಾರೆ. ಚುನಾವಣಾ ಕರ್ತವ್ಯನಿರತ 10,035 ಮಂದಿ  ಅಂಚೆ ಮೂಲಕ ಮತಚಲಾಯಿಸಲು ಮತಪತ್ರ ಗಳನ್ನು ಪಡೆದಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 8,70,991 ಪುರುಷರು ಮತ್ತು 9,10,314 ಮಹಿಳೆಯರು ಹಾಗೂ 84 ಇತರ ಮತದಾನದ ಹಕ್ಕನ್ನು ಹೊಂದಿದ್ದಾರೆ.

32 ಕ್ಲಿಷ್ಟ ಮತಗಟ್ಟೆಗಳು: ಜಿಲ್ಲೆಯಲ್ಲಿ 32 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕ್ಲಿಷ್ಟ ಮತಗಟ್ಟೆಗಳನ್ನು ಒಳಗೊಂಡಂತೆ ಒಟ್ಟು 939 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 164 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಉಳಿದ ಮತಗಟ್ಟೆಗಳಲ್ಲಿ ಸಿಪಿಎಂಎಫ್‌ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮತಗಟ್ಟೆಯಲ್ಲಿ ಮತ ಚಲಾಯಿಸಲು ಭಾರತ ಚುನಾವಣಾ ಆಯೋಗ ನೀಡಿರುವ ಭಾವ ಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಇತರ 12 ದಾಖಲೆಗಳು ಆಧಾರ್ ಕಾರ್ಡ್, ಎಂನರೇಗಾ ಜಾಬ್ ಕಾರ್ಡ್, ಸ್ವ ಭಾವಚಿತ್ರವಿರುವ ಬ್ಯಾಂಕ್/ಅಂಚೆ ಪಾಸ್ ಪುಸ್ತಕ, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಆರ್‌ಜಿಐ ಇಂಡಿಯನ್ ಪಾಸ್‌ಪೋರ್ಟ್, ಪಿಂಚಣಿ ದಾಖಲೆ, ಸರ್ವಿಸ್ ಐಡೆಂಟಿಟಿ ಕಾರ್ಡ್, ಎಂಪಿ, ಎಂಎಲ್‌ಎ, ಎಂಎಲ್‌ಸಿ ಐಡೆಂಟಿಟಿ ಕಾರ್ಡ್ ಮತ್ತು ಯುಡಿಐಡಿ ಇದರಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ ಮತಚಲಾಯಿಸಬಹುದು ಎಂದರು.

ಮತದಾನ ದಿನಾಂಕದಂದು ಮತಗಟ್ಟೆಯ  100 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆಯೊಳಗೆ ಮತದಾರ/ಮತದಾರರ ಕೈಗೂಸು, ಕುರುಡ ಮತ್ತು ದುರ್ಬಲ ಮತದಾರನ ಸಂಗಡಿಗ, ಮತಗಟ್ಟೆ ಸಿಬ್ಬಂದಿ, ಪೋಲಿಂಗ್ ಏಜೆಂಟರು, ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತ ಅಧಿಕಾರಿಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್‌ಗೆ, ಮತದಾರನಿಗೆ ಝೆಡ್ + ರಕ್ಷಣೆಗೆ ನಿಯೋಜಿತ ಸಮವಸ್ತ್ರ ಧರಿಸದ ಹಾಗೂ ಶಸ್ತ್ರಾಸ್ತ್ರವನ್ನು ಮರೆಮಾಚಿದ ಭದ್ರತಾ ಸಿಬ್ಬಂದಿಗಳ ಮತಗಟ್ಟೆ ಪ್ರವೇಶವನ್ನು ನಿಬಂಧಿಸಲಾಗಿದೆ. ಯಾವುದೇ ಕಾರಣಕ್ಕೂ ಅದ್ಯಕ್ಷಾಧಿಕಾರಿಯವರ ಅನುಮತಿ ಇಲ್ಲದೆ ಆರಕ್ಷಕ ಸಿಬ್ಬಂದಿ/ಸಿಪಿಎಂಎಫ್, ಹೋಂ ಗಾರ್ಡ್ ಮತಗಟ್ಟೆ ಪ್ರವೇಶಿಸುವಂತಿಲ್ಲ ಎಂದರು.

ಎಲ್ಲ ಸೆಕ್ಟರ್ ಅಧಿಕಾರಿಗಳು ಮೇ 10ರಂದು 3:30 ಗಂಟೆಗೆ ಚುನಾವಣಾಧಿಕಾರಿಗಳಲ್ಲಿ ಆಯಾ ಮಸ್ಟರಿಂಗ್ ಕೇಂದ್ರಗಳಲ್ಲಿ ವರದಿ ಮಾಡಿಕೊಳ್ಳಬೇಕು ಹಾಗೂ ಬೆಳಗ್ಗೆ 5:30ಕ್ಕೆ ಅಣಕು ಮತದಾನವನ್ನು ವಿಳಂಬವಿಲ್ಲದೆ ಪ್ರಾರಂಭಿಸಬೇಕಾಗುತ್ತದೆ ಎಂದು ನುಡಿದರು.

ನಿಷೇದಾಜ್ಞೆ ಜಾರಿ: ಮತದಾನ ದಿನಾಂಕದ 48 ಗಂಟೆಗಳಲ್ಲಿ ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು, ಸಾರ್ವಜನಿಕ ನಡೆಸುವುದು, ಮೆರವಣಿಗೆ ನಡೆಸುವುದು ಮತ್ತು ಬಹಿರಂಗ ಪ್ರಚಾರ ಮಾಡುವುದನ್ನು ನಿಷೇಧಿಸುವ ಉದ್ದೇಶಕ್ಕಾಗಿ ಕಲಂ 144ರನ್ವಯ ಜಿಲ್ಲೆಯಾದ್ಯಂತ ನಿಷೇದಾಜ್ಞೆಯನ್ನು ಜಾರಿಗೊಳಿಲಾಗಿದೆ.

ಮದ್ಯ ನಿಷೇಧ: ಚುನಾವಣೆಯನ್ನು ಮುಕ್ತವಾಗಿ ಮತ್ತು ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಮತದಾನದ ದಿನಾಂಕದ 48 ಗಂಟೆಗಳ ಮೊದಲು  ಜಿಲ್ಲೆಯಲ್ಲಿ ಮದ್ಯ ಮಾರಾಟವನ್ನು ಪ್ರಜಾಪ್ರತಿನಿದ್ಯ ಕಾಯಿದೆ 1951ರ ಕಲಂ 135ಸಿ ಅನ್ವಯ  ನಿಷೇಧಿಸಿ ಆದೇಶ ಹೊರಡಿಸಲಾಗಿದೆ  ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ನಗರ ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಜೈನ್ ಉಪಸ್ಥಿತರಿದ್ದರು.

Similar News