ಜಾತ್ಯತೀತ ತತ್ವ, ಸಂವಿಧಾನ ಬೆಂಬಲಿಸುವವರಿಗೆ ಜನರ ಬೆಂಬಲ: ಯು.ಟಿ.ಖಾದರ್ ವಿಶ್ವಾಸ
ಬೋಳಿಯಾರ್ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಮಾಜಿ ಸಚಿವ
ಕೊಣಾಜೆ, ಮೇ 10: ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಜಾರದಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯ 103ನೇ ಮತಗಟ್ಟೆಯಲ್ಲಿ ಪತ್ನಿ,ಮಗಳೊಂದಿಗೆ ತೆರಳಿ ಮತದಾನ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ಈ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕಾಂಗ್ರೆಸ್ ಪರ ಒಲವಿದೆ. ಕಳೆದ ಅವಧಿಯಲ್ಲಿ ರಾಜ್ಯದ ಜನರಿಗೆ ಆದ ನೋವು, ಅನ್ಯಾಯದ ಪರಿಣಾಮ ಈ ಬಾರಿ ಮತದಾರರು ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲೂ ಸರ್ವ ಧರ್ಮದ ಜನರು ಜಾತಿ ಭೇದ ಮರೆತು ಕಾಂಗ್ರೆಸನ್ನು ಬೆಂಬಲಿಸಿದ್ದಾರೆ. ಮತದಾರ ಬಾಂಧವರಿಗೆ, ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಮತಗಳಲ್ಲಿ ಬಹುಸಂಖ್ಯಾತ ಅಲ್ಪಸಂಖ್ಯಾತ ಎಂಬುದು ಇಲ್ಲ. ಸಮಾಜದ ಏಳಿಗೆಗಾಗಿ ಜಾತ್ಯತೀತ ತತ್ವದ ಮತಗಳು ಹಾಗೂ ಸಮಾಜಕ್ಕೆ ಮಾರಕವಾಗಿರುವಂತಹ ಕೋಮುವಾದಿ ಮತಗಳು ಮಾತ್ರವಿರುವುದು. ರಾಜ್ಯದಲ್ಲಿ ಶೇ.80 ಜನಸಾಮಾನ್ಯರು ಜಾತ್ಯತೀತ ತತ್ವ ಬೆಂಬಲಿಸುವವರಾಗಿದ್ದಾರೆ. ಅಂಬೇಡ್ಕರ್ ತತ್ವದ ಕಾಂಗ್ರೆಸ್ ಪಕ್ಷವನ್ನು ಮತದಾರ ಬೆಂಬಲಿಸಲಿದ್ದಾನೆ ಎಂದು ಹೇಳಿದರು.
ಪುತ್ರಿಗೆ ಪ್ರಥಮ ಮತದಾನ: ಯು.ಟಿ ಖಾದರ್ ಅವರ ಪುತ್ರಿ ಹವ್ವಾ ನಸೀಮ ತಮ್ಮ ಮೊದಲ ಹಕ್ಕನ್ನು ಜಾರದಗುಡ್ಡೆ ಶಾಲೆಯಲ್ಲಿ ತಂದೆ, ತಾಯಿಯ ಜೊತೆಗೆ ಚಲಾಯಿಸಿದರು. ಪುತ್ರಿಯ ಪ್ರಥಮ ಹಕ್ಕು ಚಲಾಯಿಸಿದ ಕುರಿತು ತಂದೆ ಖಾದರ್ ಸಂತಸ ವ್ಯಕ್ತಪಡಿಸಿದರು.