ಜನಸಾಮಾನ್ಯರ ನೋವನ್ನು ಕಾಂಗ್ರೆಸ್ ಶಮನಗೊಳಿಸಲಿದೆ: ಯು.ಟಿ.ಖಾದರ್

ಮುಡಿಪುವಿನಲ್ಲಿ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

Update: 2023-05-13 18:08 GMT

ಮಂಗಳೂರು: ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಜನಸಾಮಾನ್ಯರ ನೋವನ್ನು ಶಮನಗೊಳಿಸಲಿದೆ ಎಂದು ಐದನೇ ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿರುವ ಮಂಗಳೂರು ಕ್ಷೇತ್ರದ  ಹಾಲಿ ಶಾಸಕ ಹಾಗೂ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ಕಾಂಗ್ರೆಸ್ ನೀಡಿರುವ ಗಾರಂಟಿಯನ್ನು ಸರಕಾರ ರಚನೆಯಾದ ಬೆನ್ನಲ್ಲೇ ಈಡೇರಿಸಲಿದೆ. ಸ್ಪಷ್ಟ ಬಹುಮತ ಬಂದಿರುವ ಕಾರಣದಿಂದಾಗಿ ಕಾಂಗ್ರೆಸ್‌ಗೆ ಆಪರೇಶನ್ ಕಮಲದ ಭಯವಿಲ್ಲ. ಬಿಜೆಪಿ ಒಂದು ವೇಳೆ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೂ ಅವರಿಗೆ ಸಾಧ್ಯವಾಗದು . ಕಳೆದ  ಬಾರಿ ಬಹುಮತವಿಲ್ಲದೆ ಆಪರೇಶನ್ ಕಮಲ ನಡೆಸಿದ ಬಿಜೆಪಿಗೆ ಜನರು ಈ ಚುನಾವಣೆಯಲ್ಲಿ  ಸೋಲುಣಿಸಿದ್ದಾರೆ ಎಂದರು.

ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಆಗಿರುವ ಹಿನ್ನೆಡೆಯ ಬಗ್ಗೆ ತಮಗೆ ನೋವಿದೆ. ತಮಗೆ ಅಚ್ಚರಿಯಾಗಿದೆ. ಯಾಕೆ ಈ ರೀತಿ ಆಗಿದೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ ಎಂದು ಖಾದರ್ ಹೇಳಿದ್ದಾರೆ.

ಕ್ಷೇತ್ರದ ಜನತೆ  ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಅನುಗುಣವಾಗಿ, ಅವರ ಗೌರವಕ್ಕೆ ಧಕ್ಕೆ ಉಂಟಾಗ ದಂತೆ ಮುಂದುವರಿಯುತ್ತೇನೆ. ಸುಳ್ಳು, ಅಪ್ರಚಾರಗಳಿಗೆ ಜನರು ಮಣಿಯದೆ ತಮಗೆ ಮತ್ತೊಮ್ಮೆ ಜನಾದೇಶ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು ಫಲಿತಾಂಶವನ್ನು ಗಮನಿಸಿದರೆ ಬಿಜೆಪಿಯ ಭ್ರಷ್ಟಾಚಾರ, ಬೆಲೆ ಏರಿಕೆ, ತಾರತಮ್ಯ, ದ್ವೇಷಪೂರಿತ ಆಡಳಿತವನ್ನು ಕಿತ್ತು ಎಸೆದಿದ್ದಾರೆ.  ಬಿಜೆಪಿ  ಸರಕಾರದಿಂದ ಜನರು ಈ ವರೆಗೆ  ಅನುಭವಿಸಿದ ನೋವಿಗೆ ಸೂಕ್ತ ಪಾಠವನ್ನು  ಮತದಾನದಲ್ಲಿ ಕಲಿಸಿದ್ದಾರೆ. ಬೇರೆ ರಾಜ್ಯಗಳಿಗಿಂತ ಕರ್ನಾಟಕ ಭಿನ್ನ ಎನ್ನುವುದನ್ನು ಜನತೆ ಈ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಖಾದರ್ ಹೇಳಿದ್ದಾರೆ.

ಮುಡಿಪುವಿನಲ್ಲಿ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಯು.ಟಿ.ಖಾದರ್ ಅವರು ಜಯಗಳಿಸಿರುವ ಹಿನ್ನೆಲೆಯಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಮುಡಿಪುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿತಿಂಡಿ ಹಂಚುವ ಮೂಲಕ  ಸಂಭ್ರಮಾಚರಣೆ‌ ನಡೆಸಿದರು.

ಈ ಸಂದರ್ಭ ಮಾತನಾಡಿದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಇವತ್ತು ನಮಗೆಲ್ಲರಿಗೂ ಅವಿಸ್ಮರಣೀಯ ಕ್ಷಣವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಪಡೆಯುವುದ ರೊಂದಿಗೆ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ.ಖಾದರ್ ಅವರು ಸತತವಾಗಿ ಐದನೇ ಬಾರಿಗೆ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿದೆ. ಯು.ಟಿ.ಖಾದರ್ ಅವರು ಎಲ್ಲಾ ಜಾತಿ ಧರ್ಮದವರನ್ನು ಒಟ್ಟುಗೂಡಿಸಿ ಕ್ಷೇತ್ರದ ಅಭಿವೃದ್ಧಿ ಮಾಡಿದ ಪ್ರಾಮಾಣಿಕ, ದಕ್ಷ ನಾಯಕರಾಗಿದ್ದಾರೆ. ಅಪಪ್ರಚಾರಗಳಿಗೆ ಜನರು ಕಿವಿಗೊಡದೆ  ಬೆಂಬಲಿಸಿದ್ದು ಹಾಗೂ  ಪಕ್ಷದ ಕಾರ್ಯಕರ್ತರ ಅವಿರತ ಶ್ರಮದಿಂದ ಅವರನ್ನು ಗೆಲ್ಲಿಸಿದ್ದಾರೆ. ಗೆಲುವಿಗೆ ಕಾರಣಕರ್ತರಾದ ಎಲ್ಲರಿಗೂ ಮುಡಿಪು ಬ್ಲಾಕ್ ವತಿಯಿಂದ ಅಭಿನಂದನೆಗಳು ಹಾಗೂ ಯು.ಟಿ.ಖಾದರ್ ಅವರು ಸಚಿವರಾದ ಬಳಿಕ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ವಿಜಯೋತ್ಸವವನ್ನು ಆಚರಿಸಲಾಗುವುದು ಎಂದರು.

ಈ ಸಂದರ್ಭ ಮುಖಂಡರಾದ ಚಂದ್ರಹಾಸ್ ಕರ್ಕೇರ, ಎನ್ .ಎಸ್. ನಾಸೀರ್ ನಡುಪದವು,  ಅಬ್ದುಲ್  ಜಲೀಲ್ ಮೋಂಟುಗೋಳಿ, ಜಗದೀಶ್ ಪಲಾಯಿ, ಹೈದರ್ ಕೈರಂಗಳ, ದೇವದಾಸ್ ಭಂಡಾರಿ, ಅರುಣ್ ಡಿಸೋಜ, ಪ್ರವೀಣ್ ಆಳ್ವ, ನವಾಝ್ ನರಿಂಗಾನ, ಹನೀಫ್ ಚಂದಹಿತ್ತಿಲು, ಜುಬೈರ್ ತಲೆಮೊಗರು, ಸಿ.ಎಂ.ಶರೀಫ್ ನಡುಪದವು, ರಹಿಮಾನ್, ಸಿರಾಜ್ ಪಜೀರು, ಇಂತಿಯಾಝ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Similar News