ಯು.ಟಿ. ಖಾದರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಗೃಹಮಂತ್ರಿಯನ್ನಾಗಿ ಮಾಡಿ: ಉಳ್ಳಾಲ ಜಮಾಅತ್ ಮನವಿ

Update: 2023-05-13 18:31 GMT

ಉಳ್ಳಾಲ: ಯು.ಟಿ.ಖಾದರ್ ಅವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಗೃಹಮಂತ್ರಿಯನ್ನಾಗಿ  ಮಾಡಬೇಕು ಎಂದು ರಾಜ್ಯದ ಕಾಂಗ್ರೆಸ್ ಮುಖಂಡರನ್ನು ಉಳ್ಳಾಲದ ಜಮಾಅತ್ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು  ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಹೇಳಿದ್ದಾರೆ.

ಶಾಸಕರಾಗಿ ಮರು ಆಯ್ಕೆಗೊಂಡ ಯು.ಟಿ ಖಾದರ್ ಅವರು ಉಳ್ಳಾಲದ ಸೈಯದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಗೆ ಆಗಮಿಸಿದ ಸಂದರ್ಭ ಅವರು ಮಾತನಾಡಿದರು.

ಯು.ಟಿ ಖಾದರ್ ಅವರು ಐದನೇ ಬಾರಿ ಪ್ರಚಂಡ ಬಹುಮತದಿಂದ ಆಯ್ಕೆಗೊಂಡಿದ್ದಾರೆ.  ಕ್ಷೇತ್ರದ ಜನತೆಯ ಪ್ರೀತಿ ಇಂದಿನ ಚುನಾವಣೆ ತೋರಿಸಿಕೊಟ್ಟಿದೆ. ಈಗಾಗಲೇ ಖಾದರ್ ಅವರ ಸೇವಾ ವೈಖರಿಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿದ್ದಾರೆ. ಮೈಸೂರು ಪ್ರಾಂತ್ಯ ನಂತರದ  ಕರ್ನಾಟಕ ರಾಜ್ಯದಲ್ಲಿ ಬ್ಯಾರಿ ಸಮುದಾಯಕ್ಕೆ ಮಂತ್ರಿ ಪದವಿ ಸಿಕ್ಕಿರಲಿಲ್ಲ. 2013ರ ವರೆಗೆ ಬ್ಯಾರಿ ಸಮುದಾಯಕ್ಕೆ ದೊರೆತಿರಲಿಲ್ಲ. ಈ ಸಂದರ್ಭ ಉಳ್ಳಾಲ ದರ್ಗಾದಲ್ಲಿ ನಿರ್ಣಯಿಸಿದಂತೆ ಯು.ಟಿ ಖಾದರ್ ಅವರಲ್ಲಿ ಸಚಿವ ಸ್ಥಾನ ಪಡೆಯುವಂತೆ ಮನವಿ ಮಾಡಿಕೊಂಡಾಗ `ಯಾವುದೇ ಮಂತ್ರಿ ಪದವಿ ಆಕಾಂಕ್ಷಿಯಲ್ಲ, ಕ್ಷೇತ್ರದ ಸರ್ವಜನರ ಅಭಿವೃದ್ಧಿಗೆ ಶಾಸಕನಾಗಿರುವುದು' ಎಂದು ಪ್ರತಿಕ್ರಿಯಿಸಿದ್ದರು. ಆದರೂ ಉಳ್ಳಾಲ ದರ್ಗಾದಲ್ಲಿ ನಿರ್ಣಯಿಸಿ  ಬ್ಯಾರಿ ಸಮುದಾಯಕ್ಕೆ ಮಂತ್ರಿ ಪಟ್ಟ ಸಿಗಬೇಕು ಅನ್ನುವ ಒತ್ತಾಯವನ್ನು ಅಂದಿನ ಕಾಂಗ್ರೆಸ್ ಉಸ್ತುವಾರಿ  ಅಹಮದ್ ಪಟೇಲ್ ಅವರನ್ನು ದೆಹಲಿಯಲ್ಲಿ ಉಳ್ಳಾಲ ಜಮಾಅತ್ ಪರವಾಗಿ ಮನವಿ ಮಾಡಲಾಗಿತ್ತು.  ಅದರಂತೆ ಎರಡು ಬಾರಿ ಖಾದರ್ ಅವರು ಮಂತ್ರಿಯಾದರು. ಆ ಸಂದರ್ಭ ಅವರ  ಸೇವಾ ಚಟುವಟಿಕೆಗಳನ್ನು ಗಮನದಲ್ಲಿಟ್ಟು ಕೊಂಡು  ಈ ಬಾರಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ  ಸ್ಥಾನ ದೊರಕಿಸಿಕೊಡಬೇಕೆಂಬ ಮನವಿಯನ್ನು ರಾಜ್ಯದ ಕಾಂಗ್ರೆಸ್ ಮುಖಂಡರಲ್ಲಿ ಮಾಡಿಕೊಳ್ಳುತ್ತಿದ್ದೇವೆ. ಈವರೆಗೂ ರಾಜ್ಯದಲ್ಲಿ ಮುಸ್ಲಿಂ ವ್ಯಕ್ತಿ ಗೃಹಮಂತ್ರಿಯಾಗಿಲ್ಲ, ದೇಶದಲ್ಲಿ ಶೇ. 20 ಬ್ಯಾರಿ ಸಮುದಾಯವರಿದ್ದಾರೆ. ಈ ಪೈಕಿ 88% ಜನ ಕಾಂಗ್ರೆಸ್ಸಿಗೆ ಬೆಂಬಲಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮುಖಂಡರು ಕನಿಷ್ಠ ಯು.ಟಿ ಖಾದರ್ ಅವರನ್ನು ಗೃಹಮಂತ್ರಿಯಾಗಿ ಆಯ್ಕೆ ಮಾಡಬೇಕು  ಎಂದು ಉಳ್ಳಾಲ ಜಮಾಅತ್ ಪರವಾಗಿ ಮನವಿ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭ ಅಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಲ್ ಮುಕಚೇರಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಹಸೈನಾರ್ ಕಾಂಗ್ರೆಸ್ ಮುಖಂಡ ರಾದ ಎನ್ ಎಸ್ ಕರೀಂ, ನಾಸೀರ್ ಅಹ್ಮದ್ ಸಾಮಣಿಗೆ, ಝಿಯಾ ತಂಙಳ್ ಮತ್ತಿತರರು ಉಪಸ್ಥಿತರಿದ್ದರು

Similar News