×
Ad

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾಯ್ಕ್‌ರಿಗೆ ಗೆಲುವು

Update: 2023-05-13 23:44 IST

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾಯ್ಕ್‌ ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ರಮಾನಾಥ ರೈ ವಿರುದ್ಧ ಸುಮಾರು 8282 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಎರಡನೇ ಬಾರಿಗೆ ಬಂಟ್ವಾಳದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ರಾಜೇಶ್ ನಾಯ್ಕ್ ಅವರು 2015ರಲ್ಲಿ ಸೋಲು ಕಂಡರೂ ಮತ್ತೆ 2018ರಲ್ಲಿ ಸ್ಪರ್ಧಿಸಿ 15,971 ಮತಗಳ ಅಂತರದಿಂದ ಗೆಲುವು ಸಾಧಿಸಿದರು.  ಆದರೆ ಈ ಬಾರಿ ಗೆಲುವಿನ ಅಂತರ ಕಳೆದ ಬಾರಿಗಿಂತ 7689 ಇಳಿಕೆ ಕಂಡುಬಂದಿದೆ.

ಚುನಾವಣಾ ಎಣಿಕೆ ಆರಂಭಿಕ ಹಂತದ ಅಂಚೆ ಮತದಾನದಲ್ಲಿ  ರಮಾನಾಥ ರೈ ಮುನ್ನಡೆಯನ್ನು ಸಾಧಿಸಿದ್ದರೆ, ಬಳಿಕ ರಾಜೇಶ್ ನಾಯ್ಕ್ ಅವರು ಕೊನೆಯ ಹಂತದವರೆಗೂ ಮುನ್ನಡೆಯನ್ನು ಕಾಯ್ದುಕೊಂಡು ಬರುವ ಮೂಲಕ ಎರಡನೇ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದ್ದಾರೆ.

ಒಟ್ಟು 1,83,428 ಚಲಾಯಿತ ಮತಗಳಲ್ಲಿ ರಾಜೇಶ್ ನಾಯ್ಕ್ 93,324 (ಬಿಜೆಪಿ), ರಮಾನಾಥ ರೈ (ಕಾಂಗ್ರೆಸ್) 85,042, ಪ್ರಕಾಶ್ ಗೋಮ್ಸ್ (ಜೆಡಿಎಸ್) 454, ಪುರುಷೋತ್ತಮ ಕೋಲ್ಪೆ (ಆಮ್ ಆದ್ಮಿ) 495, ಇಲಿಯಾಸ್ ಮಹಮ್ಮದ್ ತುಂಬೆ (ಎಸ್.ಡಿ.ಪಿಐ) 5436, ನೋಟಾ 821 ಮತಗಳನ್ನು ಪಡೆದುಕೊಂಡರು.

ಹಾಲಿ ಶಾಸಕ ರಾಜೇಶ್ ನಾಯ್ಕ್ ಅವರ ಗೆಲುವಿನ ಅಂತರ 8,282 ಅಗಿದ್ದು, ಶೇಕಡಾವಾರು 50.29 ಮತಗಳಿಸಿ ಪೂರ್ಣ ಜಯ ಸಾಧಿಸಿದ್ದಾರೆ.

ಒಡ್ಡೂರಿನ ತನ್ನ ಮನೆಯಲ್ಲೇ ಕುಳಿತು ಫಲಿತಾಂಶ ವೀಕ್ಷಿಸುತ್ತಿದ್ದ ರಾಜೇಶ್ ನಾಯ್ಕ್ ಅವರು ತಮ್ಮ ಗೆಲುವಿನ ಘೋಷಣೆಯಾಗುತ್ತಿದ್ದಂತೆ ಒಡ್ಡೂರು ಧರ್ಮಚಾವಡಿಯಲ್ಲಿರುವ ಧರ್ಮದೈವ ರಾಜ್ಯ ಕೊಡಮಣಿತ್ತಾಯ ದೈವಕ್ಕೆ ಪ್ರಾರ್ಥನೆ ಸಲ್ಲಿಸಿ,  ಕಾರ್ಯಕರ್ತರೊಂದಿಗೆ ಸುರತ್ಕಲ್ ಎನ್.ಐ.ಟಿ.ಕೆ ಮತ ಎಣಿಕೆ ಕೇಂದ್ರಕ್ಕೆ ತೆರಳಿದರು. ಪ್ರಮಾಣ ಪತ್ರ ಸ್ವೀಕರಿಸಿ, ಪಕ್ಷದ ಜಿಲ್ಲಾ ಕಚೇರಿಗೆ ತೆರಳಿ ಬಳಿಕ‌ ಅಲ್ಲಿಂದ ನೇರ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನಕ್ಕಾಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪೊಳಲಿಯಿಂದ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿ ಕಾರ್ಯಕರ್ತರು, ಪ್ರಮುಖರ ಜೊತೆ ಗೆಲುವನ್ನು ಸಂಭ್ರಮಿಸಿದರು.

ರಾಜೇಶ್ ನಾಯ್ಕ್ ಅವರು ಗೆಲುವಿನ ಘೋಷಣೆಯಾಗುತ್ತಿದ್ದಂತೆ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜೈಕಾರ ಕೂಗಿ ಸಂಭ್ರಮಿಸಿದರು.

Similar News