ಬೆಳ್ತಂಗಡಿ: ಬಿಜೆಪಿ ವಿಜಯೋತ್ಸವದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ; ದೂರು ದಾಖಲು
Update: 2023-05-14 23:14 IST
ಬೆಳ್ತಂಗಡಿ: ಪೆರಾಡಿಯಲ್ಲಿ ಬಿಜೆಪಿಯ ವಿಜಯೋತ್ಸವದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ತಂಡ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ದಯಾನಂದ ಪೂಜಾರಿ ಎಂದು ಗುರುತಿಸಲಾಗಿದೆ. ವಿಜಯೋತ್ಸವ ಮೆರವಣಿಗೆಯ ಒಳಗೆ ಇವರನ್ನು ಎಳೆದುಕೊಂಡು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದ್ದು ಹಲ್ಲೆಗೆ ಒಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯ ಎದುರು ಜಮಾಯಿಸಿದ್ದರು.
ಮಾಜಿ ಶಾಸಕ ವಸಂತ ಬಂಗೇರ, ರಕ್ಷಿತ್ ಶಿವರಾಂ ಸೇರಿದಂತೆ ಹಲವರು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ದಯಾನಂದ ಪೂಜಾರಿಗೆ ಧೈರ್ಯ ತುಂಬಿದ್ದಾರೆ.
ಘಟನೆಯ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.