ಬೆಳ್ತಂಗಡಿ: ವಾರಸುದಾರರು ಇಲ್ಲದ ಮೃತದೇಹ ಬಳಿ 6 ಲಕ್ಷಕ್ಕೂ ಅಧಿಕ ನಗದು ಪತ್ತೆ
ಮಡಿಕೇರಿ ಮೇ 15 : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆ ಟೆಲಿಫೋನ್ ಎಕ್ಸ್ ಚೇಂಜ್ ಟವರ್ ಬಳಿ ವಾರಸುದಾರರಿಲ್ಲದ ಶವವೊಂದು ಪತ್ತೆಯಾಗಿದೆ.
ಮೃತ ವ್ಯಕ್ತಿ ಕೊಡಗು ಜಿಲ್ಲೆಯ ಕುಶಾಲನಗರದವರು ಎಂದು ತಿಳಿದು ಬಂದಿದೆ.
ತಮ್ಮಯ್ಯ (55) ಎಂಬುವವರೇ ಸಾವಿಗೀಡಾದವರಾಗಿದ್ದು, ಮೃತದೇಹದ ಬಳಿ 6.65 ಲಕ್ಷ ರೂ. ಪತ್ತೆಯಾಗಿದೆ. ಇವರು ಸೌದೆ ಒಡೆದು ಜೀವನ ಸಾಗಿಸುತ್ತಿದ್ದು, ದುಡಿದ ಹಣವನ್ನು ಉಳಿತಾಯ ಮಾಡಿರಬಹುದೆಂದು ಹೇಳಲಾಗಿದೆ.
ಬಸ್ ಟಿಕೆಟ್ ಮತ್ತಿತರ ಚೀಟಿಗಳನ್ನು ಪರಿಶೀಲಿಸಿದಾಗ ತಮ್ಮಯ್ಯ ಕುಶಾಲನಗರ ಭಾಗದವರೆಂದು ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸರು ಕುಶಾಲನಗರ ಮತ್ತು ಬೈಲುಕೊಪ್ಪಕ್ಕೆ ಭೇಟಿ ನೀಡಿ ಮೃತ ವ್ಯಕ್ತಿಯ ಸಂಬಂಧಿಕರ ಪತ್ತೆಗೆ ಪ್ರಯತ್ನಿಸಿದರು. ಆದರೆ ಯಾರೂ ಪತ್ತೆಯಾಗದೆ ಇರುವುದರಿಂದ ತಮ್ಮಯ್ಯ ಅವರ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು (08256-232093, 9480805370) ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.