×
Ad

ಸಿಮೆಂಟ್ ಅಕ್ರಮ‌ ದಾಸ್ತಾನು ಮಾಡಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು: ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ

ಬಿಜೆಪಿಯ ಇಬ್ಬರು ಮುಖಂಡರ ಮನೆಗೆ ತಹಶೀಲ್ದಾರ್‌, ಪೊಲೀಸ್‌ ನೇತೃತ್ವದ ತಂಡ ದಾಳಿ ಪ್ರಕರಣ

Update: 2023-05-17 21:06 IST

ಬಂಟ್ವಾಳ: ಸರಕಾರಿ ಕಾಮಗಾರಿಗೆ ಮಾತ್ರ ಬಳಸಬಹುದಾದ, ಮಾರಾಟ ಮಾಡಲು ಅವಕಾಶ ಇಲ್ಲದ ಸಿಮೆಂಟ್ ಬಿಜೆಪಿ ಮುಖಂಡರ ಮನೆಯಲ್ಲಿ  ಅಕ್ರಮವಾಗಿ ದಾಸ್ತಾನು  ಇರಿಸಿದ್ದಲ್ಲದೆ ಇದೇ ಸಿಮೆಂಟ್ ಅನ್ನು ಎರಡು ಖಾಸಗಿ ಮನೆ ಕಟ್ಟುಲು ಬಳಕೆ ಮಾಡಿರುವ ಬಗ್ಗೆ ಸೂಕ್ತ ಕಾನೂನು ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಒತ್ತಾಯಿಸಿದರು.

ಬಿಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಬಿಜೆಪಿ ಮುಖಂಡನ ಸಂಬಂಧಿಯ ಮನೆ ನಿರ್ಮಾಣದ ಸಂದರ್ಭ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ 21 ಚೀಲ ಸಿಮೆಂಟ್ ವಶಕ್ಕೆ ಪಡೆದುಕೊಂಡಿದೆ. ಇದೇ ಸಂದರ್ಭ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಡೊಂಬಯ್ಯ ಅರಳ ಅವರ ಅರಳದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಲ್ಲೂ 30 ಚೀಲ ಸಿಮೆಂಟ್ ಪತ್ತೆಯಾಗಿದ್ದು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಖಾಸಗಿ ಮನೆ ನಿರ್ಮಾಣಕ್ಕೆ ಬಳಕೆ ಮಾಡಿದ ಖಾಲಿ ಸಿಮೆಂಟ್ ಚೀಲಗಳನ್ನು ಸುಟ್ಟು ಹಾಕಲಾಗಿದೆ ಎಂದ ಅವರು ಸರ್ಕಾರಿ ರಸ್ತೆ ನಿರ್ಮಾಣಕ್ಕೆ ಬಳಸಲು ಬಂದಿದ್ದ ಮಾರಾಟಕ್ಕಿಲ್ಲದ ಸಿಮೆಂಟ್ ಅನ್ನು ಬಿಜೆಪಿ ಮುಖಂಡನಿಗೆ ಖಾಸಗಿ ಮನೆ ನಿರ್ಮಾಣಕ್ಕೆ ಬಳಸಲು ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.

ಸರ್ಕಾರದ ಸಿಮೆಂಟ್ ಕಳ್ಳತನ ಮಾಡುವವರ ಜಾಲವನ್ನು ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಸಿಮೆಂಟ್ ಹಗರಣವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಂದಾಯ ಇಲಾಖೆ ಮತ್ತು  ಪುರಸಭಾ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡವುದಿಲ್ಲ, ಸಮಗ್ರವಾದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ, ಹಾಗಾಗಿ ‌ಕೂಡಲೇ ಅಧಿಕಾರಿಗಳು ಸೂಕ್ತವಾದ ತನಿಖೆ ನಡೆಸಿ ತಕ್ಷಣ ಅರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಸುರೇಶ್ ಜೋರಾ, ಪದ್ಮನಾಭ ಸಾಮಂತ ಉಪಸ್ಥಿತರಿದ್ದರು.

Similar News