ಆ ದಂಪತಿ ಮತ್ತು ಅವರ ದೇಶ

Update: 2023-06-30 05:54 GMT

ಆಳವಾಗಿ ಸಂಶೋಧಿಸಿ ಸುಂದರವಾಗಿ ಬರೆಯಲಾಗಿರುವ ಜಾನಿ ಸ್ಟೈನ್‌ಬರ್ಗ್‌ನ ‘ವಿನ್ನಿ ಆ್ಯಂಡ್ ನೆಲ್ಸನ್’ ಕೃತಿ, ವೈಯಕ್ತಿಕ ಮತ್ತು ರಾಜಕೀಯ ನೆಲೆಗಳ ತೀವ್ರ ಒಳನೋಟವನ್ನು ಹೊಂದಿದೆ. ಇದು ದಾಂಪತ್ಯದ, ಜನರ, ದೇಶ ಮತ್ತು ಕಾಲದ ಪ್ರಬುದ್ಧ ಚಿತ್ರಣವಾಗಿದೆ. ಏಕಕಾಲಕ್ಕೇ ಜೀವನಚರಿತ್ರೆ, ಇತಿಹಾಸ, ರಾಜಕೀಯ ವ್ಯಾಖ್ಯಾನ ಮತ್ತು ಕಾಲ್ಪನಿಕವಲ್ಲದ ನಿರೂಪಣೆ ಹೀಗೆ ಇಂಥದೇ ಪ್ರಕಾರವೆಂದು ವರ್ಗೀಕರಿಸಲು ಆಗದಂತಿದೆ. ದಕ್ಷಿಣ ಆಫ್ರಿಕಾ ಕುರಿತಂತೆ ಅತಿ ಕಡಿಮೆ ಆಸಕ್ತಿ ಅಥವಾ ಯಾವುದೇ ಆಸಕ್ತಿಯಿಲ್ಲದವರೂ ಈ ಕೃತಿಯಿಂದ ಉತ್ತೇಜಿತರಾಗಬಲ್ಲರು ಮತ್ತು ಸಮೃದ್ಧವಾದ ತಿಳಿವು ಪಡೆಯಬಲ್ಲರು.


ನನಗೆ ದಕ್ಷಿಣ ಆಫ್ರಿಕಾ ವಿಚಾರದಲ್ಲಿ ಬಹು ಕಾಲದಿಂದಲೂ ಆಸಕ್ತಿ. 1995ರಲ್ಲಿ ಕೆಲಸಕ್ಕಾಗಿ ಅಲ್ಲಿಗೆ ತೆರಳಲು ಯೋಚಿಸಿದೆ. ದೇಶ ತನ್ನ ಮೊದಲ ಬಹು ಜನಾಂಗೀಯ ಚುನಾವಣೆ ಯನ್ನು ಕಂಡಿತ್ತು ಮತ್ತು ಮಹಾನಾಯಕ ನೆಲ್ಸನ್ ಮಂಡೇಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದೇಶ ಮತ್ತದರ ಜನರು ತಮ್ಮ ಗಟ್ಟಿಯಾದ ಸ್ವಾತಂತ್ರ್ಯದಿಂದ ಏನನ್ನು ಮಾಡುತ್ತಾರೆ ಎಂಬುದನ್ನು ಮೊದಲ ಹಂತದಲ್ಲಿಯೇ ನೋಡಲು ನನಗೆ ಆಳವಾದ ಕುತೂಹಲವಿತ್ತು. ಈ ಸಂದರ್ಭದಲ್ಲಿ ನಾನು ಬಯಸಿದ್ದ ಕೆಲಸ ಸಿಗಲಿಲ್ಲವಾದರೂ, ಆ ದೇಶದಲ್ಲಿನ ಬೆಳವಣಿಗೆಗಳನ್ನು ಬಲು ಹತ್ತಿರದಿಂದ ಗಮನಿಸುವುದನ್ನು ನಾನು ಮುಂದುವರಿಸಿದೆ. ಐದು ಬಾರಿ ಅಲ್ಲಿಗೆ ಪ್ರವಾಸ ಕೈಗೊಂಡೆ. ಗಳೆಯರನ್ನು ನೋಡುವುದು ಒಂದು ಕಾರಣವಾದರೆ, ದಕ್ಷಿಣ ಆಫ್ರಿಕಾದಲ್ಲಿ ಎರಡು ದಶಕಗಳನ್ನು ಕಳೆದಿದ್ದ ಮೋಹನ್‌ದಾಸ್ ಗಾಂಧಿಯ ಬಗ್ಗೆ ಅಲ್ಲಿನ ಸ್ಮತಿ ಏನನ್ನು ಹೇಳುತ್ತಿದೆ ಎಂಬುದನ್ನು ನೋಡುವುದೂ ಮತ್ತೊಂದು ಉದ್ದೇಶವಾಗಿತ್ತು.
ನಾನು ಇತ್ತೀಚೆಗೆ ಓದಿದ ಪುಸ್ತಕವೊಂದರಿಂದಾಗಿ ದಕ್ಷಿಣ ಆಫ್ರಿಕಾ ಮತ್ತದರ ಜನರ ಬಗ್ಗೆ ಮತ್ತೆ ನನ್ನಲ್ಲಿನ ಆಸಕ್ತಿ ಹೊಸದಾಗಿ ಚಿಗುರಿತು. ಇದು ಜಾನಿ ಸ್ಟೈನ್‌ಬರ್ಗ್ ಬರೆದ ‘ವಿನ್ನಿ ಆ್ಯಂಡ್ ನೆಲ್ಸನ್’. ಈ ದಂಪತಿಯ ಕಥೆಯನ್ನು ಇದು ಇವತ್ತಿಗೂ ಕಟು ಸ್ಥಿತಿಯಲ್ಲೇ ಇರುವ ಆ ನೆಲದ ಸಂಕೀರ್ಣ ಮತ್ತು ಸಂಘರ್ಷದ ಇತಿಹಾಸಕ್ಕೆ ಕಿಟಕಿಯಾಗಿ ಬಳಸುತ್ತದೆ. 1957ರ ಅವರ ಮೊದಲ ಭೇಟಿಯೊಂದಿಗೆ ಪುಸ್ತಕ ಶುರುವಾಗುತ್ತದೆ. ವಿನ್ನಿಯ ಸೌಂದರ್ಯ ಮತ್ತು ಉತ್ಸಾಹಕ್ಕೆ ನೆಲ್ಸನ್ ಮಾರುಹೋದ ಸಂದರ್ಭ ಅದು. ವಿನ್ನಿಗಿಂತ ನೆಲ್ಸನ್ ಸುಮಾರು 20 ವರ್ಷಗಳಷ್ಟು ದೊಡ್ಡವರಾಗಿದ್ದರು ಮತ್ತು ಆಗಲೇ ಮದುವೆಯಾಗಿ ಮಕ್ಕಳನ್ನೂ ಹೊಂದಿದ್ದರು. ಆದರೆ ಇದಾವುದೂ ಆಕೆಯನ್ನು ಗಾಢವಾಗಿ ಮತ್ತು ದೃಢವಾಗಿ ಪ್ರೀತಿಸುವುದಕ್ಕೆ ಅಡ್ಡಿಯಾಗಲಿಲ್ಲ. ಇನ್ನು ವಿನ್ನಿಯ ವಿಚಾರವಾಗಿ ಹೇಳುವುದಾದರೆ, ನೆಲ್ಸನ್ ವ್ಯಕ್ತಿತ್ವ ಮತ್ತು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಉದಯೋನ್ಮುಖ ನಾಯಕನಾಗಿ ನೆಲ್ಸನ್‌ಗಿದ್ದ ಸಾರ್ವಜನಿಕ ನಿಲುವು ಆಕೆಯನ್ನು ಆಕರ್ಷಿಸಿದ್ದವು.

ಸ್ಟೈನ್‌ಬರ್ಗ್‌ನ ಈ ಪುಸ್ತಕಕ್ಕೆ ‘ಪೋರ್ಟ್ರೇಟ್ ಆಫ್ ಎ ಮ್ಯಾರೇಜ್’ ಎಂಬ ಉಪಶೀರ್ಷಿಕೆಯಿದೆ. ಇದು ಸಂಪೂರ್ಣವಾಗಿ ನಿಖರ ಮತ್ತು ಅತಿ ಸಾಧಾರಣ ಎರಡೂ ಗುಣಗಳಿಂದ ಸೆಳೆಯುತ್ತದೆ. ದಶಕಗಳಿಂದ ವಿಕಸನಗೊಂಡ ಅವರ ಸಂಬಂಧವನ್ನು ಸೂಕ್ಷ್ಮ್ಮತೆ ಮತ್ತು ಅಧಿಕೃತತೆಯೊಡನೆ ಚಿತ್ರಿಸಲಾಗಿದೆ. ಪ್ರತೀ ವಿವರಕ್ಕೂ ಆ ಹೊತ್ತಿನ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದ ಹಿನ್ನೆಲೆಯಿದೆ. ನೆಲ್ಸನ್ ಮತ್ತು ವಿನ್ನಿ ಪಾತ್ರಗಳು ಸ್ಪಷ್ಟವಾಗಿ ಜೀವಂತವಾಗಿ ಬಂದಿವೆ. ಅವರ ಹೋರಾಟಗಳು, ತ್ಯಾಗಗಳು, ಆತಂಕಗಳು ಮತ್ತು ದೃಷ್ಟಿಕೋನಗಳನ್ನು ಆಳವಾಗಿ ಮತ್ತು ವಿವರವಾಗಿ ನಿರೂಪಿಸಲಾಗಿದೆ. ಜೊತೆಗೇ ಸ್ಟೈನ್‌ಬರ್ಗ್ ಅನೇಕ ಇತರ ವ್ಯಕ್ತಿಗಳ ಅಚ್ಚಳಿಯದ ಚಿತ್ರಗಳನ್ನೂ ಕೊಡುತ್ತಾನೆ. ನೆಲ್ಸನ್‌ನ ಒಡನಾಡಿಗಳು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿನ ಪ್ರತಿಸ್ಪರ್ಧಿಗಳು, ವಿನ್ನಿಯ ಸ್ನೇಹಿತರು ಮತ್ತು ಸಹವರ್ತಿಗಳು, ವರ್ಣಭೇದ ನೀತಿಯನ್ನು ಪಾಲಿಸಿದ ಕಠೋರ ಮತ್ತು ಕೆಲವೊಮ್ಮೆ ಕ್ರೂರ ಜನರು ಮತ್ತು ವರ್ಣಭೇದ ನೀತಿ ವಿರೋಧಿ ಚಳವಳಿಯ ವಿದೇಶಿ ಸ್ನೇಹಿತರು (ಅವರಲ್ಲಿ ಒಬ್ಬರಾದ ದಕ್ಷಿಣ ಭಾರತ ಸಂಜಾತ ವಿಶ್ವಸಂಸ್ಥೆ ಅಧಿಕಾರಿ ಎನುಗಾ ಎಸ್. ರೆಡ್ಡಿ) ಅಂಥ ಚಿತ್ರಗಳಲ್ಲಿದ್ದಾರೆ. ನೆಲ್ಸನ್ ಅವರ ಎಲ್ಲಾ ಮಕ್ಕಳ ಬಗ್ಗೆ ನಿರೂಪಣೆಯಲ್ಲಿ ಗಮನ ಕೊಡಲಾಗಿದೆ. ಅವರ ಬಾಲ್ಯ ಹೇಗೆ ತಂದೆಯ ಅಸಡ್ಡೆ ಅಥವಾ ಅನುಪಸ್ಥಿತಿಯಿಂದಾಗಿ ದೊಡ್ಡ ನಷ್ಟವನ್ನು ಕಂಡಿತು ಎಂಬುದನ್ನು ಹೇಳಲಾಗಿದೆ. ನೆಲ್ಸನ್ ಮತ್ತು ವಿನ್ನಿ ಇಬ್ಬರ ದಾಂಪತ್ಯ ದ್ರೋಹಗಳನ್ನು ದಾಖಲಿಸುವುದಕ್ಕೂ ಸ್ಟೈನ್‌ಬರ್ಗ್ ಹಿಂಜರಿಯುವುದಿಲ್ಲ.

ನೆಲ್ಸನ್ ಮಂಡೇಲಾ ಮತ್ತು ವಿನ್ನಿ ಮಡಿಕಿಜೆಲಾ ಮೊದಲ ಭೇಟಿಯ ಒಂದು ವರ್ಷದ ನಂತರ, 1958ರಲ್ಲಿ ವಿವಾಹವಾದರು. ಇಬ್ಬರು ಮಕ್ಕಳಾದವು. ಆದರೆ ಅವರು ಬೆಳೆಯುತ್ತಿರುವಾಗ ನೆಲ್ಸನ್ ಜೊತೆಗಿದ್ದದ್ದು ಕಡಿಮೆ. ಎರಡನೇ ಮಗುವಿನ ಜನನದ ಆನಂತರ ಮಂಡೇಲಾ ಭೂಗತರಾದರು ಮತ್ತು 1963ರಲ್ಲಿ ಅವರನ್ನು ಜೈಲಿಗೆ ಕಳಿಸಲಾಯಿತು. ಅದರ ಹೊರತಾಗಿಯೂ ನೆಲ್ಸನ್ ಪಾಲಿಗೆ ರಾಜಕೀಯವೇ ಮುಖ್ಯವಾಗಿ ದಾಂಪತ್ಯ ಅನಂತರದ ಸ್ಥಾನದಲ್ಲಿತ್ತು. ವಿನ್ನಿ ಮತ್ತು ಮಕ್ಕಳು ಅವರಿಂದ ಸಂಪೂರ್ಣವಾಗಿ ಬೇರೆಯಾದರು.

ಸ್ಟೈನ್‌ಬರ್ಗ್ ಪುಸ್ತಕ ಮೊದಲ ಪುಟದಿಂದ ಕೊನೆಯವರೆಗೂ ಓದಿಸಿಕೊಳ್ಳುತ್ತದಾದರೂ, ಹೆಚ್ಚು ಎದ್ದು ಕಾಣುವುದು ಮಂಡೇಲಾ ಅವರ ಇಪ್ಪತ್ತೇಳು ವರ್ಷಗಳ ಸೆರೆವಾಸಕ್ಕೆ ಸಂಬಂಧಿಸಿದ ಭಾಗಗಳು. ಅವು ಜೈಲಿನಲ್ಲಿರುವ ಮಂಡೇಲಾ ಬದುಕು ಮತ್ತು ಜೋಹಾನ್ಸ್ ಬರ್ಗ್ ಟೌನ್‌ಶಿಪ್‌ನಲ್ಲಿನ ವಿನ್ನಿ ಬದುಕನ್ನು ವಿವರಿಸುತ್ತವೆ. ಇಬ್ಬರ ದೃಷ್ಟಿಕೋನದಿಂದಲೂ ಪರ್ಯಾಯವಾಗಿ ನೋಡಲಾದ ನಿರೂಪಣೆಗಳಿವೆ. ರಾಬೆನ್ ದ್ವೀಪದಲ್ಲಿ ನೆಲ್ಸನ್ ಕಲ್ಲುಗಳನ್ನು ಒಡೆಯುವ ಮತ್ತಿತರ ಕಠಿಣ ಕೆಲಸಗಳಲ್ಲಿ ತೊಡಗಿದ್ದಾಗಲೂ ತಮ್ಮ ಭವಿಷ್ಯದ ರಾಜಕೀಯ ಕಾರ್ಯತಂತ್ರವನ್ನು ಯೋಜಿಸುತ್ತಿದ್ದರು. ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನಲ್ಲಿನ ವಿವಿಧ ಬಣಗಳ ಬಗ್ಗೆ ಸ್ಟೈನ್‌ಬರ್ಗ್ ಎಚ್ಚರಿಕೆಯಿಂದ ವಿವರಿಸುತ್ತಾನೆ. ಸ್ವತಃ ನೆಲ್ಸನ್ ಕಮ್ಯುನಿಸ್ಟರು ಮತ್ತು ಹೆಚ್ಚು ಮಧ್ಯಮ ಮನೋಭಾವದವರ ನಡುವೆ ಅನಿಶ್ಚಿತ ಸ್ಥಿತಿಯಲ್ಲಿದ್ದ ಸಮಯವದು. ಮುಖ್ಯವಾಗಿ, ಸ್ವಾತಂತ್ರ್ಯ ಹೋರಾಟದ ವಿವರಗಳನ್ನು ಕೊಡುವಾಗ ಸ್ಟೈನ್‌ಬರ್ಗ್, ಯಾವುದೇ ರೀತಿಯಲ್ಲೂ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನದು ಮಾತ್ರವೇ ಏಕೈಕ ಪ್ರಮುಖ ಪಾತ್ರವಾಗಿರಲಿಲ್ಲ ಎಂದು ಗುರುತಿಸುತ್ತಾನೆ. ಪ್ಯಾನ್ ಆಫ್ರಿಕನ್ ಕಾಂಗ್ರೆಸ್ ಮತ್ತು ಅದರ ವರ್ಚಸ್ವಿ ನಾಯಕ ರಾಬರ್ಟ್ ಸೊಬುಕ್ವೆ ಬಗ್ಗೆ ಸ್ವಲ್ಪವಿವರವಾಗಿಯೇ ಬರೆಯುತ್ತಾನೆ ಸ್ಟೈನ್‌ಬರ್ಗ್. ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ಬಿಳಿಯರು ಮತ್ತು ಭಾರತೀಯರಿಗೆ ತನ್ನ ತೋಳುಗಳನ್ನು ತೆರೆದರೆ, ಪ್ಯಾನ್ ಆಫ್ರಿಕನ್ ಕಾಂಗ್ರೆಸ್ ಕೇವಲ ಆಫ್ರಿಕನ್ನರನ್ನು ದೇಶದ ಅಧಿಕೃತ ನಿವಾಸಿಗಳಾಗಿ ನೋಡುವುದು ಸೂಕ್ತವೆಂದು ಭಾವಿಸಿತ್ತು. ಅದರ ಸಿದ್ಧಾಂತ ಮಂಡೇಲಾ ಪ್ರತಿಸ್ಪರ್ಧಿಯಾಗಿ ಮತ್ತು ಪ್ರಾಯಶಃ ಬೆದರಿಕೆಯಂತೆ ಕಂಡ ಸೊಬುಕ್ವೆಯ ಅಸಾಧಾರಣ ಯಶಸ್ಸಿನಿಂದ ರೂಪಿತವಾಗಿತ್ತು.

ಈ ನಡುವೆ, ಸೊವೆಟೊದಲ್ಲಿ ವಿನ್ನಿ ತನ್ನ ಸಾಧಾರಣ ಬದುಕಿನಲ್ಲಿ ಮುಳುಗಬಯಸದೆ, ತನ್ನದೇ ಆದ ಸಾರ್ವಜನಿಕ ವೃತ್ತಿಜೀವನ ರೂಪಿಸಿಕೊಳ್ಳುವ ಯತ್ನದಲ್ಲಿದ್ದರು. ಮಕ್ಕಳನ್ನು ಬೆಳೆಸುವಲ್ಲಿ ಮತ್ತು ಕೆಲಸ ಹುಡುಕುವಲ್ಲಿನ ಆಕೆಯ ತಾಪತ್ರಯಗಳು, ವರ್ಣಭೇದ ನೀತಿಯಿಂದ ಅನುಭವಿಸುವ ಕಿರುಕುಳ ಮತ್ತು ಪುನರಾವರ್ತಿತ ಜೈಲುವಾಸ ಇವೆಲ್ಲದರ ಬಗ್ಗೆ ಸ್ಟೈನ್‌ಬರ್ಗ್ ವಿವರಿಸುತ್ತಾನೆ. ಅದರ ಮಧ್ಯೆಯೇ, ಭಾರೀ ಧೈರ್ಯದಿಂದ, ಜೈಲಿನಲ್ಲಿದ್ದ ಮಂಡೇಲಾ ಅವರ ಪತ್ನಿ ಎಂಬ ಕಾರಣದಿಂದ ಆಕೆ ತನ್ನನ್ನು ತಾನು ಜನನಾಯಕಿ ಎಂದು ಘೋಷಿಸಿಕೊಳ್ಳುತ್ತಾರೆ. ಯಾವಾಗಲೂ ಸೊಗಸಾದ ಉಡುಗೆಯಲ್ಲಿ ವಿದೇಶಿ ವರದಿಗಾರರಿಗೆ ಅನೇಕ ಸಂದರ್ಶನಗಳನ್ನು ನೀಡುತ್ತಾರೆ. ಇದು ನೆಲ್ಸನ್ ಮಂಡೇಲಾ ಮತ್ತು ಅವರ ಹೋರಾಟಕ್ಕೆ ಸಾಗರೋತ್ತರವಾಗಿ ಹೆಚ್ಚು ಖ್ಯಾತಿ ತಂದುಕೊಟ್ಟಿತು. ಇದೇ ಹೊತ್ತಲ್ಲಿ, ಆಕೆಯ ಸುತ್ತ ಇರುತ್ತಿದ್ದ ಪುಂಡ ಯುವಕರ ಗುಂಪು, ವಿನ್ನಿಗೆ ತಾವು ಆಪ್ತರೆಂಬುದನ್ನೇ ತಮಗಾಗದವರನ್ನು ಬೆದರಿಸಲು, ಥಳಿಸಲು ಮತ್ತು ಕೆಲವೊಮ್ಮೆ ಕೊಲೆಗೈಯುವುದಕ್ಕೂ ಬಳಸಿಕೊಂಡರು. ಸ್ಟೈನ್‌ಬರ್ಗ್ ಹೇಳುವಂತೆ, ಇದಾವುದನ್ನೂ ವಿನ್ನಿ ಸ್ವತಃ ತಿಳಿದಿರಲಿಲ್ಲ ಮತ್ತು ತನ್ನ ಹೆಸರಿನಡಿ ಆಶ್ರಯ ಪಡೆದವರು ಸಾಂದರ್ಭಿಕವಾಗಿ ಮಾಡಿದ್ದ ಹಿಂಸಾಚಾರಗಳಲ್ಲಿ ಆಕೆ ಭಾಗಿಯಾದಂತಾಗಿತ್ತು.

1980ರ ದಶಕದ ಅಂತ್ಯದ ವೇಳೆಗೆ, ದಕ್ಷಿಣ ಆಫ್ರಿಕಾದ ಬಿಳಿಯ ಆಡಳಿತಗಾರರು ತಡವಾಗಿಯಾದರೂ ಈಗಿನ ವರ್ಣಭೇದ ನೀತಿ ಸಮರ್ಥನೀಯವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಅವರು ನೆಲ್ಸನ್ ಮಂಡೇಲಾ ಜೊತೆ ಜೈಲಿನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಿದರು. ಬಿಕ್ಕಟ್ಟಿನಿಂದ ಹೊರಬರುವ ಮಾರ್ಗವನ್ನು ಹುಡುಕಿದರು. ಮಧ್ಯವರ್ತಿಗಳಲ್ಲಿ ವರ್ಣಭೇದ ನೀತಿಯ ಆಡಳಿತದ ಇಬ್ಬರು ಬಿಳಿಯ ಗುಪ್ತಚರ ಅಧಿಕಾರಿಗಳು ಇದ್ದರು. ಅವರು ಮಂಡೇಲಾ ಜೊತೆ ಹೆಚ್ಚಿನ ಸಂಧಾನ ಸಮಯವನ್ನು ಕಳೆದ ನಂತರ ರಹಸ್ಯ ಟಿಪ್ಪಣಿಯಲ್ಲಿ ಹೀಗೆ ಬರೆದರು: ‘ತನ್ನ ಸಂಘಟನೆಯೆಡೆಗಿನ ನಿಷ್ಠೆಗೆ ದ್ರೋಹವೆಸಗುವಂತೆ ಮಾಡಲು ಯತ್ನಿಸಬಹುದೇ ಹೊರತು, ಅವರ ಆಳವಾದ ರಾಜಕೀಯ ತಾತ್ವಿಕತೆಯಿಂದ ಅವರನ್ನು ಹಿಂದೆ ಸರಿಯುವಂತೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿಯೊಬ್ಬ ಹೋರಾಟಮಾಡುವುದು ತನ್ನ ಆಧ್ಯಾತ್ಮಿಕ ಶಕ್ತಿಯಿಂದ, ಕಹಿಯಿಲ್ಲದಿರುವಿಕೆಯಿಂದ, ಸಹಜವಾದ ಸಜ್ಜನಿಕೆಯಿಂದ, ಹಾಗೆಯೇ ವೈಯಕ್ತಿಕ ಪರಿಪೂರ್ಣತೆಯಿಂದ.’

ಈ ಮಾತುಗಳು ನನಗೆ 1922ರಲ್ಲಿ ಅಹಮದಾಬಾದ್‌ನಲ್ಲಿ ಮಹಾತ್ಮ ಗಾಂಧಿಯವರನ್ನು ದೇಶದ್ರೋಹಕ್ಕಾಗಿ ಶಿಕ್ಷೆಗೊಳಪಡಿಸುವಾಗ ನ್ಯಾಯಾಧೀಶ ರಾಬರ್ಟ್ ಬ್ರೂಮ್‌ಫೀಲ್ಡ್ ಮಾಡಿದ ಟೀಕೆಗಳನ್ನು ನೆನಪಿಸುತ್ತವೆ. ವಸಾಹತುಶಾಹಿ ನ್ಯಾಯಾಧೀಶರು ಗಾಂಧಿಯನ್ನು ಕುರಿತು ಹೇಳಿದ್ದು ಹೀಗೆ: ‘‘ನಾನು ಶಿಕ್ಷೆ ನೀಡಿದ ಅಥವಾ ಮುಂದೆ ನೀಡಬಹುದಾದ ಯಾವುದೇ ವ್ಯಕ್ತಿಗಿಂತ ನೀವು ಭಿನ್ನರಾಗಿದ್ದೀರಿ. ನಿಮ್ಮ ಲಕ್ಷಾಂತರ ದೇಶವಾಸಿಗಳ ದೃಷ್ಟಿಯಲ್ಲಿ ನೀವು ಮಹಾನ್ ದೇಶಭಕ್ತ ಮತ್ತು ಶ್ರೇಷ್ಠ ನಾಯಕ ಎಂಬ ಅಂಶವನ್ನು ನಿರ್ಲಕ್ಷಿಸುವುದು ಅಸಾಧ್ಯ. ರಾಜಕೀಯದಲ್ಲಿ ನಿಮ್ಮ ವಿರೋಧಿಗಳು ಕೂಡ ನಿಮ್ಮನ್ನು ಉನ್ನತ ಆದರ್ಶಗಳುಳ್ಳ, ಉದಾತ್ತ ಮತ್ತು ಸಂತನಂಥ ವ್ಯಕ್ತಿಯಾಗಿ ನೋಡುತ್ತಾರೆ.’’ ಚಾಲ್ತಿಯಲ್ಲಿದ್ದ ಕಾನೂನಿನ ಅಡಿಯಲ್ಲಿ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸುವಾಗ ಬ್ರೂಮ್‌ಫೀಲ್ಡ್ ಹೇಳಿದರು: ‘‘ನಿಮ್ಮ ಈ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ಮತ್ತು ನಿಮ್ಮನ್ನು ಬಿಡುಗಡೆ ಮಾಡಲು ಸರಕಾರಕ್ಕೆ ಸಾಧ್ಯವಾಗುವಂತಾದರೆ ನನಗಿಂತ ಸಂತೋಷಪಡುವವರು ಬೇರೆ ಯಾರೂ ಇಲ್ಲ.’’

ಇದು ಬಹುಶಃ ಮಂಡೇಲಾ ಮತ್ತು ಗಾಂಧಿಯಲ್ಲಿನ ಶ್ರೇಷ್ಠತೆಯ ನಿಜವಾದ ಗುರುತು. ಅವರು ತಮ್ಮನ್ನು ಮತ್ತು ತಮ್ಮ ಜನರನ್ನು ತುಳಿದ ಸಾಮ್ರಾಜ್ಯಶಾಹಿಗಳಲ್ಲಿಯೂ ಮಾನವೀಯತೆಯನ್ನು ಪ್ರಚೋದಿಸಲು ಸಮರ್ಥರಾಗಿದ್ದರು.

ಫೆಬ್ರವರಿ 1990ರಲ್ಲಿ ನೆಲ್ಸನ್ ಮಂಡೇಲಾ ಇಪ್ಪತ್ತೇಳು ವರ್ಷಗಳ ಜೈಲುವಾಸದ ನಂತರ ಬಿಡುಗಡೆಯಾದರು. ವಿನ್ನಿ ಪಕ್ಕದಲ್ಲಿದ್ದಾಗ, ಅವರು ಜನಾಂಗೀಯವಲ್ಲದ ಮತ್ತು ನಿಜವಾದ ಪ್ರಜಾಪ್ರಭುತ್ವದ ದಕ್ಷಿಣ ಆಫ್ರಿಕಾದ ಬಗ್ಗೆ ತಮ್ಮ ಭರವಸೆ ಕುರಿತು ಪತ್ರಿಕೆಗಳು ಮತ್ತು ವಿಶ್ವದೊಡನೆ ಮಾತನಾಡಿದರು. ದೀರ್ಘಕಾಲದಿಂದ ಬೇರ್ಪಟ್ಟ ಪತಿ ಪತ್ನಿಯರ ಈ ಚಿತ್ರವು ಈಗ ಮತ್ತೊಮ್ಮೆ ಒಂದಾಗಿದ್ದಾರೆ ಮತ್ತು ರಾಜಕೀಯ ಮೌಲ್ಯಗಳನ್ನು ಹಂಚಿ ಕೊಂಡಿದ್ದಾರೆ ಎಂಬಂತೆ ಇತ್ತು. ಪರಸ್ಪರ ದೂರವಿದ್ದ ವರ್ಷ ಗಳಲ್ಲಿ ಅವರ ದಾರಿಗಳು ಹೆಚ್ಚು ಹೊಂದಾಣಿಕೆಯ ವಾಗಿರುವುದಿಲ್ಲ. ವಿನ್ನಿಯ ಅನೇಕ ಸಂಬಂಧಗಳು ನೆಲ್ಸನ್‌ಗೆ ತುಸು ನೋವುಂಟು ಮಾಡಿದ್ದವು. ವಿನ್ನಿ ಮತ್ತು ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ನಡುವೆ ಬಿರುಕು ಉಂಟಾದ ಬಳಿಕವಂತೂ ಪರಿಸ್ಥಿತಿ ಪೂರ್ತಿ ಬಿಗಡಾಯಿಸಿತ್ತು. ಆಕೆಯ ಸುತ್ತಲಿದ್ದ ಯುವಕರ ಗುಂಪು ಮಾಡಿದ ಹಿಂಸಾತ್ಮಕ ಕೃತ್ಯಗಳ ಪುರಾವೆಗಳು ಜಗಜ್ಜಾಹೀರಾದವು. ಬಹುಶಃ ತಪ್ಪಿತಸ್ಥ ಭಾವನೆಯಿಂದ - ಇಷ್ಟು ಕಾಲ ಆಕೆಯನ್ನು ಏಕಾಂಗಿಯಾಗಿ ಬಿಟ್ಟಿದ್ದಕ್ಕಾಗಿ - ಮಂಡೇಲಾ ಈ ಅಪರಾಧಗಳಲ್ಲಿ ವಿನ್ನಿಯ ಪಾಲುದಾರಿಕೆ ಮುಚ್ಚಿಡಲು ಪ್ರಯತ್ನಿಸಿದರು. ಆದರೆ ಅಂತಿಮವಾಗಿ ಅದು ಅಸಾಧ್ಯವೆಂದು ಸಾಬೀತಾಯಿತು. ವೈಯಕ್ತಿಕವಾಗಿ, ರಾಜಕೀಯವಾಗಿ ಬೇರೆಯಾಗುವುದು ಅನಿವಾರ್ಯವಾಯಿತು.

ನೆಲ್ಸನ್ ಮತ್ತು ವಿನ್ನಿ 1996ರಲ್ಲಿ ವಿಚ್ಛೇದನ ಪಡೆದರು. ಡಿಸೆಂಬರ್ 2013ರಲ್ಲಿ ನೆಲ್ಸನ್ ಮರಣ ಹೊಂದುವವರೆಗೂ ಮತ್ತು ನಾಲ್ಕೂವರೆ ವರ್ಷಗಳ ನಂತರ ವಿನ್ನಿಯ ಮರಣದವರೆಗೂ ಪುಸ್ತಕ ಅವರ ವೈಯಕ್ತಿಕ ಪಯಣವನ್ನು ದಾಖಲಿಸುತ್ತದೆ. ತುಂಬ ಮನಮುಟ್ಟುವುದೆಂದರೆ, ನೆಲ್ಸನ್ ಅವರ ಅಂತಿಮ ಅನಾರೋಗ್ಯದ ಸಮಯದಲ್ಲಿ ಅವರನ್ನು ನೋಡಲು ವಿನ್ನಿ ಬರುವುದು; ಮತ್ತು ಜೈಲಿನಿಂದ ವಿನ್ನಿಗೆ ನೆಲ್ಸನ್ ಬರೆದಿದ್ದ ಅತ್ಯಂತ ಮಧುರ ಪ್ರೀತಿಯ ಪತ್ರಗಳ ಉದ್ಧರಣೆಗಳು ಮರಳಿ ತರುವ ಆ ವರ್ಷಗಳ ನೆನಪು.

ಆಳವಾಗಿ ಸಂಶೋಧಿಸಿ ಸುಂದರವಾಗಿ ಬರೆಯಲಾಗಿರುವ ಜಾನಿ ಸ್ಟೈನ್‌ಬರ್ಗ್‌ನ ‘ವಿನ್ನಿ ಆ್ಯಂಡ್ ನೆಲ್ಸನ್’ ಕೃತಿ, ವೈಯಕ್ತಿಕ ಮತ್ತು ರಾಜಕೀಯ ನೆಲೆಗಳ ತೀವ್ರ ಒಳನೋಟವನ್ನು ಹೊಂದಿದೆ. ಇದು ದಾಂಪತ್ಯದ, ಜನರ, ದೇಶ ಮತ್ತು ಕಾಲದ ಪ್ರಬುದ್ಧ ಚಿತ್ರಣವಾಗಿದೆ. ಏಕಕಾಲಕ್ಕೇ ಜೀವನಚರಿತ್ರೆ, ಇತಿಹಾಸ, ರಾಜಕೀಯ ವ್ಯಾಖ್ಯಾನ ಮತ್ತು ಕಾಲ್ಪನಿಕವಲ್ಲದ ನಿರೂಪಣೆ ಹೀಗೆ ಇಂಥದೇ ಪ್ರಕಾರವೆಂದು ವರ್ಗೀಕರಿಸಲು ಆಗದಂತಿದೆ. ದಕ್ಷಿಣ ಆಫ್ರಿಕಾ ಕುರಿತಂತೆ ಅತಿ ಕಡಿಮೆ ಆಸಕ್ತಿ ಅಥವಾ ಯಾವುದೇ ಆಸಕ್ತಿಯಿಲ್ಲದವರೂ ಈ ಕೃತಿಯಿಂದ ಉತ್ತೇಜಿತರಾಗಬಲ್ಲರು ಮತ್ತು ಸಮೃದ್ಧವಾದ ತಿಳಿವು ಪಡೆಯಬಲ್ಲರು.

Similar News