ಉಚ್ಚಿಲ: ತಡೆಬೇಲಿಗೆ ಕಾರು ಢಿಕ್ಕಿ; ವೃದ್ಧೆ ಮೃತ್ಯು

Update: 2023-05-21 15:10 GMT

ಉಳ್ಳಾಲ: ಹೆದ್ದಾರಿ ಬದಿಯ ಕಬ್ಬಿಣದ ಸಲಾಕೆಯ ತಡೆಬೇಲಿಗೆ ಓಮ್ನಿ‌ ಕಾರು ಢಿಕ್ಕಿ ಹೊಡೆದ ಪರಿಣಾಮ 85ರ ವೃದ್ಧೆಯೋರ್ವರು ಮೃತಪಟ್ಟ ಘಟನೆ ಉಚ್ಚಿಲ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಜತ್ತೂರು ನಿವಾಸಿ ಬಿ.ಫಾತಿಮಾ (85) ಮೃತರು. ಫಾತಿಮಾ ಅವರು ತನ್ನ ಮಗ ಮೂಸ (50), ಮೊಮ್ಮಗ ಮಸ್ತಫಾ (24) ಜೊತೆ ನಿನ್ನೆ ಮಂಗಳೂರಿನ ಅಡ್ಡೂರಿಗೆ ತೆರಳಿ ಸಂಬಂಧಿಕರೋರ್ವರ ಶವಸಂಸ್ಕಾರವೊಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಫಾತಿಮಾ ಓಮ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದು, ಮೊಮ್ಮಗ ಮುಸ್ತಫಾ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ನಿದ್ದೆ ಮಂಪರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಸಿಬ್ಬಂದಿಗಳಾದ ಮಹೇಶ್ ಆಚಾರ್ಯ ಮತ್ತು ವಿಠ್ಠಲ್ ದಾಸ್ ಅವರು ಕಬ್ಬಿಣದ ಸಲಾಕೆಯೆಡೆಯಲ್ಲಿ ಸಿಲುಕಿದ್ದ ಫಾತಿಮಾರನ್ನ ಹೊರಗೆಳೆದು ತಮ್ಮ ಇಲಾಖಾ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News