ಸಂಪುಟ ವಿಸ್ತರಣೆ: ಸಿಎಂ, ಡಿಸಿಎಂ ಇಂದು ಹೊಸದಿಲ್ಲಿಗೆ ಪ್ರಯಾಣ
ಬೆಂಗಳೂರು, ಮೇ 24: ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು (ಮೇ 24) ಸಂಜೆ ಹೊಸದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮೊದಲ ಹಂತದಲ್ಲಿ 8 ಮಂದಿ ಸಚಿವರ ಜೊತೆ ಇಬ್ಬರು ನಾಯಕರು ಪ್ರಮಾಣ ವಚನ ಸ್ವೀಕರಿಸಿದ್ದು, ಬಾಕಿ ಇರುವ 24 ಸಚಿವ ಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡಿಕೊಳ್ಳಲು ಪೈಪೋಟಿ ಏರ್ಪಟ್ಟಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸುವ ಬಗ್ಗೆ ತೆರೆ ಮರೆಯಲ್ಲೇ ಕಸರತ್ತು ನಡೆಸಿದ್ದಾರೆ.
ಹಿರಿತನ, ಜಾತಿ, ಪ್ರಾದೇಶಿಕ ಆದ್ಯತೆಯನ್ನು ಪರಿಗಣಿ ಹಿರಿಯರು-ಕಿರಿಯರ ಸಮ್ಮಿಶ್ರಣದ ಸಂಪುಟ ರಚನೆ ಮಾಡುವ ಸಾಧ್ಯತೆಗಳಿವೆ.
ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನೀಡುವ ನಿರೀಕ್ಷೆಯಿದೆ. ಜೊತೆಗೆ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ನಸೀರ್ ಅಹಮ್ಮದ್ ಸೇರಿದಂತೆ ಹಲವರ ಹೆಸರುಗಳು ಸಚಿವ ಸ್ಥಾನಕ್ಕೆ ಚರ್ಚೆಯಲ್ಲಿವೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಜತೆಗೆ ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಆ ಭಾಗದ ಸದಸ್ಯರಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.