ವಿಧಾನಸಭೆ ಸ್ಪೀಕರ್‌ ಸ್ಥಾನಕ್ಕೆ ಯು.ಟಿ ಖಾದರ್ ಅವಿರೋಧ ಆಯ್ಕೆ

Update: 2023-05-24 15:56 GMT

ಬೆಂಗಳೂರು, ಮೇ 23: ಹದಿನಾರನೆಯ ವಿಧಾನಸಭೆಯ ನೂತನ ಸಭಾಧ್ಯಕ್ಷ(ಸ್ಪೀಕರ್)ರಾಗಿ ಯು.ಟಿ.ಖಾದರ್ ಅವರು ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರು ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಾಗ ಸಭಾನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯು.ಟಿ.ಖಾದರ್ ಫರೀದ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಅವರ ಪ್ರಸ್ತಾವವನ್ನು ಅನುಮೋದಿಸಿದರು.

ಬಳಿಕ ಆರ್.ವಿ.ದೇಶಪಾಂಡೆ ಮಾತನಾಡಿ, ‘ಮುಖ್ಯಮಂತ್ರಿ ಸೂಚಿಸಿರುವ ಹಾಗೂ ಉಪಮುಖ್ಯಮಂತ್ರಿ ಅನುಮೋದಿಸಿರುವ ಚುನಾವಣೆ ಪ್ರಸ್ತಾವವನ್ನು ಮತಕ್ಕೆ ಹಾಕುವುದಾಗಿ ಪ್ರಕಟಿಸಿದರು. ಆಗ ಸದನದಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು. ತದನಂತರ, ಯು.ಟಿ.ಖಾದರ್ ಫರೀದ್ ಅವರು ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರು ಘೋಷಿಸಿದರು. 

ನಂತರ ನೂತನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರನ್ನು ವಿಧಾನಸಭೆಯ ಎಲ್ಲ ಸದಸ್ಯರು ಮೇಜು ಕುಟ್ಟಿ ನೂತನ ಸಭಾಧ್ಯಕ್ಷರನ್ನು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ, ಸಂಪ್ರದಾಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವಾನುಮತದಿಂದ ಆಯ್ಕೆಯಾದ ಖಾದರ್ ಅವರನ್ನು ಸಭಾಧ್ಯಕ್ಷರ ಪೀಠದ ವರೆಗೂ ಕರೆತಂದರು. ಆಗ ದೇಶಪಾಂಡೆ ಅವರು ನೂತನ ಸ್ಪೀಕರ್ ಗೆ ಪೀಠವನ್ನು ಬಿಟ್ಟುಕೊಟ್ಟು ನಿರ್ಗಮಿಸಿದರು.

Full View

Similar News