ಮಣಿಪುರ ಹಿಂಸಾಚಾರ ಕೊನೆಗೊಳಿಸಲು ಕ್ರಮ ತೆಗೆದುಕೊಳ್ಳಿ: ಭಾರತಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಮಿಶನರ್ ಒತ್ತಾಯ

Update: 2023-05-25 16:21 GMT

ಹೊಸದಿಲ್ಲಿ, ಮೇ 25: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಮಿಶನರ್ ವೊಲ್ಕರ್ ಟರ್ಕ್ ಬಿಡುಗಡೆಗೊಳಿಸಿರುವ ಹೇಳಿಕೆಯೊಂದರಲ್ಲೂ ಪ್ರಸ್ತಾವಗೊಂಡಿದೆ. ಜಾಗತಿಕ ಮಾನವಹಕ್ಕುಗಳ ಘೋಷಣೆಗೆ 75 ವರ್ಷಗಳು ತುಂಬಿರುವ ತುಂಬಿರುವ ಸಂದರ್ಭದಲ್ಲಿ ಅವರು ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಜಾಗತಿಕ ಮಾನವಹಕ್ಕುಗಳ ಘೋಷಣೆಗೆ 75 ವರ್ಷಗಳು ತುಂಬಿರುವ ಸಂಭ್ರಮದ ಆಚರಣೆಗಾಗಿ ವಿಶ್ವಸಂಸ್ಥೆಯು ‘ಹ್ಯೂಮನ್‌ರೈಟ್ಸ್ 75’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ವೊಲ್ಕರ್ ಟರ್ಕ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚಾಲನೆ ನೀಡಿದ್ದಾರೆ.

‘‘ಕೆಲವು ಗುಂಪುಗಳು ಸಮುದಾಯಗಳನ್ನು ಪ್ರಚೋದಿಸಿ ಅವುಗಳ ನಡುವೆ ದ್ವೇಷ ಮತ್ತು ವಿಭಜನೆಯನ್ನು ಹುಟ್ಟುಹಾಕುತ್ತವೆ. ಹಲವು ಪ್ರಕರಣಗಳಲ್ಲಿ ಇದರ ಪರಿಣಾಮಗಳನ್ನು ನಾವು ನೋಡಿದ್ದೇವೆ. ಇದಕ್ಕೆ ಇತ್ತೀಚಿನ ಉದಾಹರಣೆ ಈಶಾನ್ಯ ಭಾರತದ ಮಣಿಪುರದಲ್ಲಿ ನಡೆದ ಹಿಂಸಾಚಾರ. ವಿಭಿನ್ನ ಜನಾಂಗೀಯ ಮತ್ತು ಬುಡಕಟ್ಟು ಗುಂಪುಗಳ ನಡುವೆ ಆಂತರ್ಯದಲ್ಲಿ ಇರುವ ಉದ್ವಿಗ್ನತೆಯನ್ನು ಈ ಹಿಂಸಾಚಾರ ಬಹಿರಂಗಪಡಿಸಿದೆ. ಇಂಥ ಪರಿಸ್ಥಿತಿಗಳಲ್ಲಿ ಕ್ಷಿಪ್ರವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ. ಅಧಿಕಾರಿಗಳು ತಮ್ಮ ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಬಾಧ್ಯತೆಗಳಿಗೆ ಅನುಗುಣವಾಗಿ ಈ ಹಿಂಸಾಚಾರಗಳ ತನಿಖೆ ಮಾಡಬೇಕು ಮತ್ತು ಅವುಗಳ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು’’ ಎಂದು ಮೇ 24ರಂದು ಹೊರಡಿಸಿರುವ ಹೇಳಿಕೆಯಲ್ಲಿ ಟರ್ಕ್ ಹೇಳಿದ್ದಾರೆ.

ಟರ್ಕ್ ತನ್ನ ಹೇಳಿಕೆಯಲ್ಲಿ, ಮಣಿಪುರದ ಜೊತೆಗೆ, ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮಾನವಹಕ್ಕು ಉಲ್ಲಂಘನೆಗಳು, ಸುಡಾನ್‌ನಲ್ಲಿ ನಾಗರಿಕರ ಹತ್ಯೆ, ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡಾ ಹತ್ಯೆ, ಎಲ್‌ಜಿಬಿಟಿಕ್ಯೂ ಹಕ್ಕುಗಳ ಉಲ್ಲಂಘನೆಗಳು, ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಆಟಗಾರ ವಿನ್ಸಿಯಸ್ ಜೂನಿಯರ್ ಸ್ಪೇನ್‌ನಲ್ಲಿ ಎದುರಿಸುತ್ತಿರುವ ಜನಾಂಗೀಯ ನಿಂದನೆ, ಚೀನಾದಲ್ಲಿ ಮಾನವಹಕ್ಕುಗಳ ಹೋರಾಟಗಾರರಿಗೆ ವಿಧಿಸಲಾಗುತ್ತಿರುವ ಜೈಲುಶಿಕ್ಷೆ ಮತ್ತು ಫ್ಲಾಯ್ಡ್ ಹತ್ಯೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಮಹಿಳೆಯರ ವಿರುದ್ಧ ನಡೆಸುತ್ತಿರುವ ಲಿಂಗ ತಾರತಮ್ಯ ವಿಷಯಗಳನ್ನೂ ಪ್ರಸ್ತಾಪಿಸಿದ್ದಾರೆ.

‘‘ವಲಸಿಗರು ಮತ್ತು ನಿರಾಶ್ರಿತರ ವಿರುದ್ಧದ ದ್ವೇಷಪೂರಿತ ಮಾತುಗಳು ಮತ್ತು ಹಾನಿಕಾರಕ ವ್ಯಾಖ್ಯಾನಗಳು ಈಗಲೂ ವ್ಯಾಪಕವಾಗಿ ಹರಿದಾಡುತ್ತಿವೆ. ಇವುಗಳಿಗೆ ವಲಸಿಗ-ವಿರೋಧಿ ಕಾನೂನುಗಳು ಮತ್ತು ನೀತಿಗಳು ಬೆಂಬಲ ನೀಡುತ್ತಿವೆ. ಈ ಮಾತುಗಳು ಮತ್ತು ವ್ಯಾಖ್ಯಾನಗಳು ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು ನಿರಾಶ್ರಿತರ ಕಾನೂನುಗಳ ಅಡಿಪಾಯವನ್ನೇ ದುರ್ಬಲಗೊಳಿಸುವ ಬೆದರಿಕೆಯನ್ನು ಒಡ್ಡಿವೆ’’ ಎಂದು ಟರ್ಕ್ ಹೇಳಿದ್ದಾರೆ.

‘‘ಬ್ರಿಟನ್, ಅಮೆರಿಕ, ಇಟಲಿ, ಗ್ರೀಸ್ ಮತ್ತು ಲೆಬನಾನ್ ಸೇರಿದಂತೆ ಹಲವು ದೇಶಗಳಲ್ಲಿನ ಬೆಳವಣಿಗೆಗಳು ಕಳವಳಕಾರಿಯಾಗಿವೆ. ಅವುಗಳು ಆಶ್ರಯ ಮತ್ತು ಇತರ ರಕ್ಷಣೆಗಳನ್ನು ಕೋರುವುದರಿಂದ ಜನರನ್ನು ತಡೆಯುತ್ತವೆ; ಅವರಿಗೆ ಸಹಾಯ ಮಾಡುವವರನ್ನು ಶಿಕ್ಷಿಸಲು ಮುಂದಾಗುತ್ತವೆ ಅಥವಾ ವಲಸಿಗರನ್ನು ಕಾನೂನುಬಾಹಿರ, ಘನತೆರಹಿತ ಮತ್ತು ಸರಿಯಲ್ಲದ ವಿಧಾನಗಳಲ್ಲಿ ವಾಪಸ್ ಕಳುಹಿಸುವಂತೆ ಬಲವಂತಪಡಿಸುತ್ತದೆ’’ ಎಂದು ಅವರು ತಿಳಿಸಿದ್ದಾರೆ.

‘‘ಜಾಗತಿಕ ಮಾನವಹಕ್ಕುಗಳ ಘೋಷಣೆಯ 14ನೇ ವಿಧಿಯು ಹಿಂಸಾಚಾರದಿಂದ ತಪ್ಪಿಸಿಕೊಂಡು ಆಶ್ರಯ ಕೋರುವ ಮತ್ತು ಅನುಭವಿಸುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡುತ್ತದೆ. ಸಂಕಷ್ಟದ ಪರಿಸ್ಥಿತಿಗಳಲ್ಲಿರುವ ಎಲ್ಲಾ ಜನರನ್ನು ಮಾನವೀಯತೆಯಿಂದ ಕಾಣಬೇಕು ಮತ್ತು ಅವರ ಹಕ್ಕುಗಳನ್ನು ಗೌರವಿಸಬೇಕು. ಇಂಥ ಪರಿಸ್ಥಿತಿಯೊಂದು ಸೃಷ್ಟಿಯಾಗಲು ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’’ ಎಂದು ಅವರು ಹೇಳಿದ್ದಾರೆ.

ಮಣಿಪುರದಲ್ಲಿ, ಕುಕಿ-ರೊಮಿ ಬುಡಕಟ್ಟು ಪಂಗಡಗಳು ಮತ್ತು ಬಹುಸಂಖ್ಯಾತ ಮೆಟಾಯ್ ಸಮುದಾಯದ ನಡುವೆ ಇತ್ತೀಚೆಗೆ ಹಿಂಸಾಚಾರ ಸಂಭವಿಸಿದೆ. ಮೆಟಾಯ್ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಕುಕಿ ಬುಡಕಟ್ಟು ಪಂಗಡಗಳು ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಹಿಂಸಾಚಾರ ಸ್ಫೋಟಗೊಂಡಿದೆ.

ಹಿಂಸಾಚಾರದಲ್ಲಿ ಈವರಗೆ 70ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Similar News