ಹಣ ಅಕ್ರಮ ವರ್ಗಾವಣೆ ಪ್ರಕರಣ: ಅಲಹಾಬಾದ್ ಹೈಕೋರ್ಟ್ ನಿಂದ ಅತಿಕುರ್ರಹ್ಮಾನ್ ಗೆ ಜಾಮೀನು

Update: 2023-05-25 17:24 GMT

ಅಲಹಾಬಾದ್, ಮೇ 25: ಪತ್ರಕರ್ತ ಸಿದ್ದೀಕ್ ಕಪ್ಪನ್ ಕೂಡ ಆರೋಪಿಯಾಗಿರುವ ಹಾಥರಸ್ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಪಿಎಚ್ ಡಿ ಪದವೀಧರ ಹಾಗೂ ಸಾಮಾಜಿಕ ಹೋರಾಟಗಾರ ಅತೀಕುರ್ರಹ್ಮಾನ್ ಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.

ಅಲಹಾಬಾದ್ ನ್ಯಾಯಾಲಯ ಗುರುವಾರ ನೀಡಿದ ಆದೇಶ 940 ದಿನಗಳ ಕಾಲ ಸೆರವಾಸದಲ್ಲಿದ್ದ ಅತಿಕುರ್ರಹ್ಮಾನ್ ಅವರಿಗೆ ಬಿಡುಗಡೆಯಾಗಲು ದಾರಿ ಮಾಡಿ ಕೊಟ್ಟಿದೆ. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಲಾದ ಪ್ರತ್ಯೇಕ ಪ್ರಕರಣದಲ್ಲಿ  ಅತೀಕುರ್ರಹ್ಮಾನ್ ಗೆ ಉಚ್ಚ ನ್ಯಾಯಾಲಯ ಮಾರ್ಚ್ 15ರಂದು ಜಾಮೀನು ನೀಡಿತ್ತು.

ಆದರೆ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಕಾರಣದಿಂದ ಅವರು ಕಾರಾಗೃಹದಲ್ಲೇ ಇರಬೇಕಾಗಿತ್ತು. 2020 ಸೆಪ್ಟಂಬರ್ 14ರಂದು ದಲಿತ ಯುವತಿಯನ್ನು ಪ್ರಬಲ ಜಾತಿಯಾದ ಠಾಕೂರ್ ಸಮುದಾಯಕ್ಕೆ ಸೇರಿದ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿ ಹತೈಗೈದ ಉತ್ತರಪ್ರದೇಶದ ಹಾಥರಸ್ ಗೆ ತೆರಳುತ್ತಿದ್ದ ಸಂದರ್ಭ ಪತ್ರಕರ್ತ ಕಪ್ಪನ್, ರಿಕ್ಷಾ ಚಾಲಕ ಮುಹಮ್ಮದ್ ಆಲಂ ಹಾಗೂ ವಿದ್ಯಾರ್ಥಿ ಮಸೂದ್ ಅಹ್ಮದ್ ಅವರೊಂದಿಗೆ ಅತಿಕುರ್ರಹ್ಮಾನ್ ಅವರನ್ನು 2020 ಅಕ್ಟೋಬರ್ ನಲ್ಲಿ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.

ನಾಲ್ವರ ವಿರುದ್ಧ ದೇಶದ್ರೋಹದ ಆರೋಪ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅನಂತರ ಜಾರಿ ನಿದೇಶನಾಲಯ 2021 ಫೆಬ್ರವರಿಯಲ್ಲಿ ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಗಲಭೆ ಪ್ರಚೋದಿಸಲು ಅತಿಕುರ್ರಹ್ಮಾನ್ ಹಾಗೂ ಇತರ ಮೂವರು ಈಗ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಹಣ ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯ ಪ್ರತಿಪಾದಿಸಿತ್ತು.

Similar News