27 ಸಾವಿರ ‘ಅತಿಥಿ ಶಿಕ್ಷಕರ ನೇಮಕ’ಕ್ಕೆ ರಾಜ್ಯ ಸರಕಾರ ನಿರ್ಧಾರ; ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಸ್ವಾಗತ

Update: 2023-05-26 09:43 GMT

ಬೆಂಗಳೂರು:  ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅನುಗುಣವಾಗಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಆದೇಶ ಹೊರಡಿಸಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿರ್ಧಾರವನ್ನು  'ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ' ಸ್ವಾಗತಿಸಿದೆ. 

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅಭಿವೃದ್ಧಿ ಶಿಕ್ಷಣ ತಜ್ಞ ಮತ್ತು ಸಮನ್ವಯ ವೇದಿಕೆಯ ಸಂಸ್ಥಾಪಕ ಪೋಷಕರಾಗಿರುವ ನಿರಂಜನಾರಾಧ್ಯ ವಿ.ಪಿ, ಶಾಲೆ ಪ್ರಾರಂಭವಾಗಲು ಕೇವಲ ಕೆಲವೇ ದಿನಗಳು (ಮೇ 29,2023) ಮಾತ್ರ ಬಾಕಿ ಇದ್ದು, ಸರಕಾರ ಶಿಕ್ಷಣದ ವಿಷಯವನ್ನು ಅತ್ಯಂತ ಜರೂರಿನ ವಿಷಯವನ್ನಾಗಿ ಪರಿಗಣಿಸಿ, ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ಅವುಗಳನ್ನು ತಕ್ಷಣದ ಆದ್ಯತೆ ಮತ್ತು ನಂತರದ ಆದ್ಯತೆಗಳೆಂದು ಪರಿಗಣಿಸಿ ಕ್ರಮ ವಹಿಸಬೇಕೇಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ  ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ದಿನಾಂಕ 21.05.2023 ರಂದು ಖುದ್ದು ಮುಖ್ಯ ಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು ಎಂದು ತಿಳಿಸಿದ್ದಾರೆ. 

ಇನ್ನು ಮುಖ್ಯ ಮಂತ್ರಿಗಳಿಗೆ ನೀಡಿದ್ದ ಮನವಿಯಲ್ಲಿನ ಒಂದು ಪ್ರಮುಖ ಬೇಡಿಕೆಗಳನ್ನು ಕೂಡ  ಕೂಡಲೇ ಈಡೇರಿಸುವಂತೆ ಒತ್ತಾಯಿಸಿದ್ದಾರೆ. 

'ಪ್ರಮುಖ ಬೇಡಿಕೆಗಳೇನೆಂದರೆ,ಕಳೆದ ಹಲವು  ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿ ಮಕ್ಕಳ ಕಲಿಕೆಯನ್ನು ಪೂರ್ಣವಾಗಿ ಹಳಿ ತಪ್ಪಿಸಿದೆ . 2021-22  ನೇ ಸಾಲಿನಲ್ಲಿ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಸುಮಾರು1,41,358ರಷ್ಟು ಇದ್ದು,  ಈ ಪೈಕಿ  13,352  ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ , ಶಾಲೆ ಪ್ರಾರಂಭವಾಗುವ ಮುನ್ನ ಅವರು ಶಾಲೆಗಳಲ್ಲಿರುವಂತೆ ತುರ್ತು ಕ್ರಮ ವಹಿಸುವುದು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದರೂ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಖಾಯಂ ಶಿಕ್ಷಕರ ನೇಮಕಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ. 

'ಬಾಕಿ ಖಾಲಿ ಉಳಿಯುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು  ಜೂನ್ 15ರ ಒಳಗಾಗಿ ನೇಮಿಸಿಕೊಳ್ಳಲು ಯುದ್ಧೋಪಾದಿಯಲ್ಲಿ ಕ್ರಮ ವಹಿಸುವುದು. ಈ ಪ್ರಕ್ರಿಯೆಯನ್ನು ಎಸ್ಡಿಎಂಸಿ ವ್ಯಾಪ್ತಿ ಹಾಗು ವಿವೇಚನೆಗೆ ಬಿಡಬೇಕು ಎಂದು  ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಒತ್ತಾಯಿಸುತ್ತದೆ' ಎಂದು ನಿರಂಜನಾರಾಧ್ಯ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News