ಏಷಿಯಾನಾ ಏರ್‌ಲೈನ್ಸ್ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕ: ತೇಜಸ್ವಿ ಸೂರ್ಯ ಕಾಲೆಳೆದ ಜನರು !

Update: 2023-05-26 13:19 GMT

ಬೆಂಗಳೂರು: ಏಷಿಯಾನಾ ಏರ್‌ಲೈನ್ಸ್ A321 ವಿಮಾನದಲ್ಲಿ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನದ ಬಾಗಿಲು ತೆರೆದಿದ್ದು, ವಿಮಾನವನ್ನು ದಕ್ಷಿಣ ಕೊರಿಯಾದ ಡೇಗು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಘಟನೆಯಿಂದ  9 ಪ್ರಯಾಣಿಕರು ಉಸಿರಾಟದ ತೊಂದರೆಯಿಂದ ಬಳಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಘಟನೆಯ ಸುದ್ದಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಾಲೆಳೆದಿದ್ದಾರೆ. ಪತ್ರಕರ್ತೆ ನಿಧಿ ರಾಝ್‍ದಾನ್ ಈ ಸುದ್ದಿಯನ್ನು ಹಂಚಿಕೊಂಡು, “ಪ್ರಯಾಣಿಕ ಬೆಂಗಳೂರಿನವರೇ?” ಎಂದು ಪರೋಕ್ಷವಾಗಿ ತೇಜಸ್ವಿ ಸೂರ್ಯ ಅವರ ಕಾಲೆಳೆದಿದ್ದಾರೆ. 

ತೇಜಸ್ವಿ ಸೂರ್ಯ ಸಾಂಕ್ರಾಮಿಕ ರೋಗವು ಈಗ ಜಾಗತಿಕವಾಗಿದೆ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. 

ಡಾ. ನರ್ಮಲಾ ದತ್‌ ಎಂಬವರು ತೇಜಸ್ವಿ ಸೂರ್ಯ ಅವರನ್ನು ಉಲ್ಲೇಖಿಸಿ, "ಮತ್ತೆ ಅದನ್ನೇ ಮಾಡಿದ್ರಾ? ಹಾಗೆ ಮಾಡಬಾರದೆಂದು ಹೇಳಿದ್ದೆ ಅಲ್ವಾ?ʼ ಎಂದು ವ್ಯಂಗ್ಯ ಮಾಡಿದ್ದಾರೆ. 
ಕಾಂಗ್ರೆಸ್‌ ನಾಯಕಿ ಲಾವಣ್ಯ ಬಲ್ಲಾಳ್ ಕೂಡಾ ತೇಜಸ್ವಿ ಸೂರ್ಯರನ್ನು ಟ್ರೋಲ್‌ ಮಾಡಿದ್ದು, ಇದು ನೀವಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಬೆಂಗಳೂರು ದಕ್ಷಿಣದಿಂದ ಯಾರಾದರೂ ಆ ವಿಮಾನಕ್ಕೆ ಹತ್ತಿದ್ದರೇ ಎಂದು ಪ್ರಶ್ನಿಸಿದರೆ, ಕೆಲವರು ನೇರವಾಗಿ ತೇಜಸ್ವಿ ಸೂರ್ಯ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದರೇ ಎಂದು ಪ್ರಶ್ನಿಸಿದ್ದಾರೆ.

ಚೆನ್ನೈಯ ವಿಮಾನವೊಂದರಲ್ಲಿ ತುರ್ತು ನಿರ್ಗಮನ ಬಾಗಿಲನ್ನು ತೆರೆದು ತೇಜಸ್ವಿ ಸೂರ್ಯ ಅವರು ಯಡವಟ್ಟು ಮಾಡಿಕೊಂಡಿದ್ದರು. ಈ ಪ್ರಕರಣವು ಸಂಸದ ತೇಜಸ್ವಿ ಸೂರ್ಯ ಅವರಿಗೆ ವ್ಯಾಪಕ ಮುಜುಗರ ಉಂಟು ಮಾಡಿತ್ತು. ಸಂಸದರ ಬೇಜವಾಬ್ದಾರಿಯ ಬಗ್ಗೆಯೂ ನೆಟ್ಟಿಗರು ಪ್ರಶ್ನಿಸಿದ್ದರು. ಅಲ್ಲದೆ, ಇಂತಹ ಗುರುತರ ಪ್ರಮಾದ ಎಸಗಿಯೂ ಸಂಬಂಧಪಟ್ಟವರು ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿತ್ತು.

Similar News