ಲಾಲ್‍ಬಾಗ್‍ನಲ್ಲಿ ‘ಮಾವು, ಹಲಸು ಮೇಳ’ಕ್ಕೆ ಚಾಲನೆ

Update: 2023-05-26 13:36 GMT

ಬೆಂಗಳೂರು, ಮೇ 26: ನಗರದ ಲಾಲ್‍ಬಾಗ್‍ನಲ್ಲಿ ಮಾವು, ಹಲಸಿನ ಮೇಳವನ್ನು ನಡೆಯುತ್ತಿದ್ದು, ಶುಕ್ರವಾರದಂದು ಸಚಿವ ರಾಮಲಿಂಗಾರೆಡ್ಡಿ ಹಾಗೂ ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಮೇಳಕ್ಕೆ ಚಾಲನೆ ನೀಡಿದರು.  

ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸುವುದು ಮಾವು ಹಾಗೂ ಹಲಸು ಮೇಳದ ಉದ್ದೇಶವಾಗಿದೆ. ಇಂದಿನಿಂದ(ಮೇ 26) ಜೂ.13ರ ವರೆಗೆ ಲಾಲ್‍ಬಾಗ್‍ನಲ್ಲಿ ಮಾವು, ಹಲಸಿನ ಮೇಳ ನಡೆಯಲಿದ್ದು, ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ. ಮೇಳದಲ್ಲಿ ಬಾದಾಮಿ, ರಸ್ಪೂರಿ, ಮಲ್ಲಿಕಾ, ಮಲ್ಗೋವಾ, ಕಾಡುಮಾವು, ಕಾಲಪಾಡು, ದಶೇರಿ, ಕೇಸರ್, ನೀಲಂ ಸೇರಿದಂತೆ ಹಲವು ಬಗೆಯ ಮಾವು ತಳಿಗಳ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. 

ಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಏಳು ಬಗೆಯ ಹಲಸಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನು ಈ ಮೇಳದಲ್ಲಿ ತೋಟಗಾರಿಕೆ ಇಲಾಖೆ ಶೇ.10ರಷ್ಟು ರಿಯಾಯಿತಿ ದರ ನಿಗದಿ ಮಾಡಿದೆ. ಮಾವಿನ ಹಣ್ಣು ಕೆ.ಜಿ.ಗೆ 32 ರೂ.ನಿಂದ ಆರಂಭವಾಗಿ 215 ರೂ.ಗಳ ವರೆಗೆ ಇದೆ. ಹಲಸಿನ ಹಣ್ಣು ಕೆ.ಜಿ.ಗೆ 25 ರೂ. ರಂತೆ ಮಾರಾಟ ಮಾಡಲಾಗುತ್ತಿದೆ.

Similar News