ರಾಜೀನಾಮೆ ಕೊಡುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ, ಅದೆಲ್ಲ ವಾಟ್ಸಾಪ್ ಯೂನಿವರ್ಸಿಟಿ ಸೃಷ್ಟಿ: ಬಿ.ಕೆ.ಹರಿಪ್ರಸಾದ್

Update: 2023-05-27 14:42 GMT

ಬೆಂಗಳೂರು: 'ಸಚಿವ ಸಂಪುಟ ವಿಸ್ತರಣೆ ಮತ್ತು ನಿರ್ಧಾರ ಮುಖ್ಯಮಂತ್ರಿಗಳ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿದವನಲ್ಲ, ರಾಜೀನಾಮೆ ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ, ಅದೆಲ್ಲ ವಾಟ್ಸಾಪ್ ಯೂನಿವರ್ಸಿಟಿ ಸೃಷ್ಟಿ' ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.  

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ನನ್ನ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿಯವರು ನನ್ನ ಮೇಲೆ ಜವಾಬ್ದಾರಿ ಕೊಟ್ಟು ಪರಿಷತ್ ಸದಸ್ಯತ್ವ ಸ್ಥಾನ ನೀಡಿದ್ದಾರೆ. ಅದನ್ನ ನಿಭಾಯಿಸುತ್ತಿದ್ದೇನೆ. ರಾಜೀನಾಮೆ ನೀಡುವುದಾದರೆ ಸೋನಿಯಾಗಾಂಧಿ ಹಾಗೂ ಸಭಾಪತಿಯವರಿಗೆ ನೀಡುತ್ತೇನೆ. ಸಚಿವ ಸ್ಥಾನ ಇಲ್ಲದಿದ್ದರೂ ನಾನು ಪರಿಷತ್ ನಲ್ಲಿ ಸಾಮಾನ್ಯ ಸದಸ್ಯನಾಗಿರುತ್ತೇನೆ'' ಎಂದು ತಿಳಿಸಿದರು. 

'ನಾನು ಸ್ವಂತ ಮನೆಯಲ್ಲಿ ಇರುವವನು, ಈ ಮನೆ ಬಿಟ್ಟು ಹೋಗೋದಕ್ಕೆ ಅಥವಾ ಅದನ್ನು ಧ್ವಂಸ ಮಾಡೋದಕ್ಕೆ ಬಾಡಿಗೆ ಮನೆಯಿಂದ ಬಂದವನಲ್ಲ. ರಾಜೀನಾಮೆ ವಿಚಾರ ವಾಟ್ಸಾಪ್ ಯೂನಿವರ್ಸಿಟಿ ಸೃಷ್ಟಿ' ಎಂದರು.

'ಮೇಲ್ಮನೆ ವಿಪಕ್ಷ ನಾಯಕರನ್ನು, ಸಭಾನಾಯಕರನ್ನ ಮಾಡೊದು ಸಂಪ್ರದಾಯ, ಪದ್ದತಿ ಹಿಂದಿನಿಂದಿಲೂ ಇತ್ತು.ಆ ಸಂಪ್ರದಾಯ ಮುರಿದಿದ್ದಾರೆ.  ಸಚಿವ ಸ್ಥಾನ ಅದು ಮುಖ್ಯಮಂತ್ರಿಗಳ ಪರಮಾಧಿಕಾರ.ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಪರಿಷತ್ ನಲ್ಲಿ ಸಭಾನಾಯಕರನ್ನಾಗಿ ಯಾರನ್ನ ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನೇ ಕೇಳಿ' ಎಂದು ಹೇಳಿದರು.

'ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ಅಧಿಕಾರ ಹಂಚಿಕೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರಿಗೆ ಮಾತ್ರ ಗೊತ್ತಿದೆ. ಉಳಿದವರು ಯಾರೇ ಮಾತಾಡಿದರೂ ಕೇವಲ ಒಬ್ಬರನ್ನ ಓಲೈಸಿಕೊಳ್ಳಲು ಮಾತ್ರ. ಯಾರೇ ಅಧಿಕಾರ ಹಂಚಿಕೆ ಬಗ್ಗೆ ಮಾತಾಡಿದರೂ ಅದು ಸುಳ್ಳು' ಎಂದರು. 

Similar News