ಜಾನಪದ ವಿವಿಯಲ್ಲಿ ಅಕ್ರಮ ನೇಮಕಾತಿ ಆರೋಪ: ತನಿಖೆಗೆ ಆಗ್ರಹಿಸಿ ಸಿಎಂಗೆ ರಮೇಶ್‍ ಬಾಬು ಪತ್ರ

Update: 2023-05-27 15:22 GMT

ಬೆಂಗಳೂರು, ಮೇ 27: ಜಾನಪದವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಸ್ಥಾಪಿತವಾದ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದಲ್ಲಿ ರಾತೋರಾತ್ರಿ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಯನ್ನು ನಿಯಮಾವಳಿ ಮೀರಿ ಅಕ್ರಮವಾಗಿ ನೇಮಕ ಮಾಡಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‍ಬಾಬು ಮನವಿ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು, ‘ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಿದ್ದ ಸಂದರ್ಭದಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು, ಭೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಆತುರ ಆತುರವಾಗಿ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೆ ರಾಜ್ಯದಲ್ಲಿ ಜವಾಬ್ದಾರಿಯುತ ಚುನಾಯಿತ ಸರಕಾರ ಇಲ್ಲದ ಸಂದರ್ಭದಲ್ಲಿ ಸ್ವಜನ ಪಕ್ಷಪಾತದ ಕಾರಣಕ್ಕಾಗಿ ಮತ್ತು ನೇಮಕಾತಿಗಳಲ್ಲಿ ಹಣದ ವ್ಯವಹಾರವನ್ನು ನಡೆಸುವ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು, ನೇಮಕಾತಿಗೆ ಚಾಲನೆ ನೀಡಲಾಗಿದ್ದು, ಅರ್ಧರಾತ್ರಿಯಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಕಾನೂನುಬಾಹಿರವಾಗಿ ಗೊತ್ತುವಳಿಗಳನ್ನು ಮಾಡುವುದರ ಮೂಲಕ ಅನೇಕ ಅನುಮಾನಗಳಿಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಜಾನಪದ ಕಲೆಯ ಪ್ರತಿಬಿಂಬವಾದ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂತಹ ಆಕ್ರಮಗಳಿಗೆ ಅವಕಾಶವನ್ನು ನೀಡುವುದರ ಮೂಲಕ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತು ಇತರ ಅಧಿಕಾರಿಗಳು ತಮ್ಮ ಶಾಮೀಲುತನವನ್ನು ಬಹಿರಂಗ ಪಡಿಸಿರುತ್ತಾರೆ. ಸೂಕ್ತವಾದ ತನಿಖೆಯ ಹೊರತು ಅಕ್ರಮವನ್ನು ಬಯಲಿಗೆಳೆಯಲು ಸಾಧ್ಯವಿಲ್ಲ ಎಂದು ರಮೇಶ್‍ಬಾಬು ತಿಳಿಸಿದ್ದಾರೆ.

Similar News